ಬೋವಿ ಜನಾಂಗಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ

ಚಿಕ್ಕಬಳ್ಳಾಪುರ, ನ 3: ಬೋವಿ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ.  ರಾಜಕೀಯವಾಗಿಯೂ ಹೆಚ್ಚು ಪ್ರಾತಿನಿಧ್ಯ ನೀಡಲಾಗುವುದು ಎಂದು ಮುಖಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.  

ನಗರದ ನಂದಿ ರಂಗಮಂದಿರದಲ್ಲಿ ಕರ್ನಾಟಕ ಬೋವಿ ಸಮಾಜ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ದಲಿತರಿಗೆ ಒಳ ಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಬೋವಿ ಸಮುದಾಯ ಒತ್ತಾಯಿಸುತ್ತಿದೆ. ಆದರೆ ಬೋವಿ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲ ಎಂದರು. 

ಬೋವಿ ಸಮಾಜ ಶ್ರಮ ಸಂಸ್ಕೃತಿ ಅಳವಡಿಸಿಕೊಂಡಿರುವ ಜನಾಂಗವಾಗಿದೆ. ಈ ಸಮುದಾಯದ ಕುಲವೃತ್ತಿಗೆ ಸಹಕಾರಿಯಾಗುವಂತೆ ಅರಣ್ಯ ಕಾಯಿದೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಗುವ ಕಿರುಕುಳವನ್ನು ತಪ್ಪಿಸಲಾಗುವುದು. ಈ ಸಮಾಜಕ್ಕೆ ಕಲ್ಲು ಒಡೆಯಲು ಕೆಲವು ಪ್ರದೇಶಗಳನ್ನು ಮೀಸಲಿಟ್ಟು ಅಭಿವೃದ್ಧಿಗೆ ಸಹಕರಿಸಲು ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದರು.  

ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯೆ ನೀಡುವ ಬಗ್ಗೆ ಒತ್ತಡ ಬಂದಿದ್ದು, ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯೆ ಕೊಡುವ ವಿಚಾರವಾಗಿಯೂ ಗಮನ ಹರಿಸುವುದಾಗಿ ತಿಳಿಸಿದರು.  

ಬೋವಿ ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡಲಾಗುವುದು. ಸದ್ಯ ನೆರೆ ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಿಗಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು.  ಈ ಸಮಾಜದ ಗುರುಪೀಠದ ಸಮಗ್ರ ಅಭಿವೃದ್ಧಿಗೆ ತಾತ್ಕಾಲಿಕವಾಗಿ ಸರ್ಕಾರ 5 ಕೋಟಿ ರೂ ಅನುದಾನ ನೀಡಲಾಗುವುದು ಎಂದರು.  

ನವೆಂಬರ್ 8 ರಂದು ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅಡಿಗಲ್ಲು ಹಾಕಲಾಗುವುದು. ಈಗಾಗಲೇ  ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯನ್ನು ಹೊಸ ತಾಲೂಕಾಗಿ ಘೋಷಿಸಲಾಗಿದೆ. ನವೆಂಬರ್ 8 ರಂದು ಚಿಕ್ಕಬಳ್ಳಾಪುರ ನಗರ ಪ್ರದೇಶದ  ಐದು ಸಾವಿರ ನಿವೇಶನರಹಿತ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗುವುದು. ಇದಕ್ಕಾಗಿ ಅಗತ್ಯವಿರುವ 117 ಎಕರೆ ಜಮೀನು ಮಂಜೂರಾತಿಗೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ ಎಂದರು.  

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ಬೋವಿ ಸಿದ್ದರಾಮೇಶ್ವರರ ಗುರುಪೀಠದ ಸ್ವಾಮೀಜಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಗೂಳಿಹಟ್ಟಿ ಶೇಖರ್ ಮತ್ತಿತರರು ಹಾಜರಿದ್ದರು.