ಭಾರತ ಬಂದ್ಗೆ ನೀರಸ ಪ್ರತಿಕ್ರಿಯೆ; ಎಲ್ಲೆಡೆ ಕಾರ್ಮಿಕರಿಂದ ಪ್ರತಿಭಟನೆ

ಬೆಂಗಳೂರು, ಜ.8, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಆದರೂ ರಾಜ್ಯದ ಬಹುತೇಕ ಕಡೆ ಜನಜೀವನ ಎಂದಿನಂತಿದ್ದು, ಬಂದ್ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳು ವಿವಿಧ ಸಂಘಟನೆಗಳೊಂದಿಗೆ ಸೇರಿ ಜಾಥಾ, ಪ್ರತಿಭಟನೆಗಳನ್ನು ನಡೆಸುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಬಸ್ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಬಿಎಂಟಿಸಿ ಬಸ್ಗಳು ಸಂಚರಿಸುತ್ತಿವೆ.ಮಡಿಕೇರಿ ನಗರದ ಹೊರವಲಯದ ಚೈನ್ ಗೇಟ್ ಬಳಿ ಇಂದು ಬೆಳಗ್ಗೆ ದುಷ್ಕರ್ಮಿಗಳು ಸರ್ಕಾರಿ ಬಸ್ಸಿಗೆ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ. ಇಂದು ಬೆಳಿಗ್ಗೆ ಮಡಿಕೇರಿಯಿಂದ ಮೈಸೂರಿಗೆ ಸರ್ಕಾರಿ ಬಸ್ ತೆರಳುತ್ತಿತ್ತು. ಆಗ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ಬಸ್ಸಿನ ಮುಂಭಾಗದ ಗ್ಲಾಸ್ಗೆ ಹಾನಿಯಾಗಿದೆ. ಬಸ್ಸಿನಲ್ಲಿ ಯಾರು ಪ್ರಯಾಣಿಕರು ಇಲ್ಲದೇ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.ಮಂಡ್ಯ ಜಿಲ್ಲೆಯ ಪಾಂಡವಪುರ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್ ಇದಾಗಿದ್ದು. ಬಸ್ ಚಾಲಕ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತಿಭಟನೆ ಮಾಡುವವರು ಈ ರೀತಿಯಲ್ಲಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿಯಲ್ಲಿ ಮಾಡಿದ್ದಾರೆ. ಕೊಡಗು ಶಾಂತಿ ಪ್ರಿಯನಾಡು ಈ ರೀತಿಯಲ್ಲಿ ಕೃತ್ಯ ಮಾಡುವವರನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಯಿಸಿದ್ದಾರೆ.ಶಾಲಾ, ಕಾಲೇಜುಗಳು ಪರಿಸ್ಥಿತಿ ಆಧರಿಸಿ ರಜೆ ಘೋಷಣೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾಧಿಗಳಿಗೆ ಸರ್ಕಾರ ನೀಡಿದ್ದು, ಸಾರಿಗೆ ಸೇವೆಯಲ್ಲಿ ಆಟೋ ಸಂಘಟನೆಗಳ ಹೊರತಾಗಿ ಉಳಿದೆಲ್ಲವೂ ನೈತಿಕ ಬೆಂಬಲ ನೀಡಿವೆ. ಬಸ್, ಮೆಟ್ರೋ, ಕ್ಯಾಬ್ ಸೇರಿದಂತೆ ಸಾರಿಗೆ ಸೇವೆ ಸಾಮಾನ್ಯವಾಗಿವೆ.ಹೋಟೆಲ್, ಆಸ್ಪತ್ರೆ, ಆ್ಯಂಬುಲೆನ್ಸ್ ಔಷಧ, ದಿನಸಿ ಹಾಗೂ ತರಕಾರಿ ಮಾರುಕಟ್ಟೆ ಹಾಲು ಸೇರಿದಂತೆ ಸರಕು ಸಾಗಣೆ ಸಾಮಾನ್ಯವಾಗಿವೆ. ಕೆಎಸ್ಆರ್'ಟಿಸಿ, ಬಿಎಂಟಿಸಿ ಸೇರಿದಂತೆ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಆದರೆ, ಬಸ್ ಸೇವೆಯಲ್ಲಿ ವ್ಯತ್ಯಯಗಳು ಕಂಡು ಬಂದಿಲ್ಲ. ಮೆಟ್ರೋ ರೈಲು, ಮೊಬೈಲ್ ಆ್ಯಪ್ ಆಧಾರಿತ ಓಲಾ, ಉಬರ್, ಪ್ರವಾಸಿ ವಾಹನಗಳು, ಸರಕು ಸಾಗಣೆ ಲಾರಿ ಮಾಲೀಕರ ಸಂಘಟನೆಗಳು ಮುಷ್ಕರಕ್ಕೆ ಬಾಹ್ಯ ಬೆಂಬಲ ಮಾತ್ರ ನೀಡಿವೆ. ರಾಜಧಾನಿ ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕರ ಸಂಘಟನೆಗಳ ಪೈಕಿ ಕೆಲ ಸಂಘಟನೆಗಳು ಬೆಂಬಲ ಸೂಚಿಸಿ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿವೆ. ನೆಲಮಂಗಲ, ಆನೇಕಲ್ ಸೇರಿದಂತೆ ಹಲವೆಡೆ ಕಾರ್ಮಿಕರು ಬೈಕ್ ಜಾಥಾ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಾರತ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬಲವಂತದ ಬಂದ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಜಾಥಾ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.