ನವದೆಹಲಿ, ಫೆ 13 : ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರು ಭಾಗಿಯಾಗಿದ್ದ, 2000 ಇಸವಿಯಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ಪ್ರಮುಖ ಬುಕ್ಕಿ ಸಂಜೀವ್ ಚಾವ್ಲಾ ನನ್ನು ಇಂಗ್ಲೆಡ್ ನಿಂದ ಗುರುವಾರ ಬೆಳಗ್ಗೆ ಭಾರತಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ.
ಡಿಸಿಪಿಯೊಬ್ಬರ ನೇತೃತ್ವದ ದೆಹಲಿ ಅಪರಾಧ ವಿಭಾಗ ಪೊಲೀಸರ ತಂಡವೊಂದು, ಹೈಪ್ರೊಫೈಲ್ ಆರೋಪಿಯನ್ನು ಕರೆತರಲು ಲಂಡನ್ ಗೆ ತೆರಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಸಂಜೀವ್ ಚಾವ್ಲಾ ಅವರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
50ರ ಹರೆಯದ ಸಂಜೀವ್ ಚಾವ್ಲಾ 2000ದಲ್ಲಿ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೆ ಭಾಗಿಯಾಗಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿಯಾಗಿದ್ದ.
ಬಲಗೈ ಬ್ಯಾಟ್ಸ್ ಮನ್ ಹ್ಯಾನ್ಸಿ ಕ್ರೋನಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದರು, ನಂತರ ಅವರು 2002ರಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.
ಮ್ಯಾಚ್ ಫಿಕ್ಸಿಂಗ್ ಸಂಬಂಧ ಕ್ರೋಂಜೆ ಹಾಗೂ ಚಾವ್ಲಾ ನಡುವಣ ನಡೆದ ದೂರವಾಣಿ ಸಂಭಾಷಣೆ ಕದ್ದಾಲಿಕೆಯ ನಂತರ ಅಪರಾಧ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು.
ಭಾರತಕ್ಕೆ ತಮ್ಮನ್ನು ಹಸ್ತಾಂತರಿಸುವುದನ್ನು ತಪ್ಪಿಸಿಕೊಳ್ಳಲು ಸಂಜೀವ್ ಚಾವ್ಲಾ ಮಾನವ ಹಕ್ಕುಗಳ ಐರೋಪ್ಯ ನ್ಯಾಯಾಲಯ( ಇ ಸಿ ಹೆಚ್ ಆರ್)ದ ಮೊರೆ ಹೋಗಿದ್ದರು. ಆದರೆ ಅದು ಆರ್ಜಿಯನ್ನು ತಿರಸ್ಕರಿಸಿ ಭಾರತಕ್ಕೆ ಹಸ್ತಾಂತರಿಸಲು ಅವಕಾಶ ಮಾಡಿಕೊಟ್ಟಿತ್ತು
ಮಾನವ ಹಕ್ಕುಗಳ ಆಧಾರದ ಮೇಲೆ ಚಾವ್ಲಾ ಸಲ್ಲಿಸಿದ್ದ ಮನವಿಯನ್ನು ಲಂಡನ್ ಹೈಕೋರ್ಟ್ ಸಹ ಜನವರಿ 23 ರಂದು ತಿರಸ್ಕರಿಸಿ, ಭಾರತಕ್ಕೆ ಗಡೀಪಾರು ಮಾಡಲು 28 ದಿನಗಳ ಗಡುವು ವಿಧಿಸಿತ್ತು
ಸಂಜೀವ್ ಚಾವ್ಲಾ ನಿಗೆ ಸೂಕ್ತ ಭದ್ರತೆ ಹಾಗೂ ಸುರಕ್ಷತೆಯತೆಯಡಿ ಕಾರಾಗೃಹದಲ್ಲಿ ಏಕಾಂತವಾಗಿರಿಸಲಾಗುವುದು ಎಂದು ಭಾರತ ನೀಡಿದ ಭರವಸೆಯನ್ನು ಅಂಗೀಕರಿಸಿರುವುದಾಗಿ ಇಬ್ಬರು ಸದಸ್ಯರ ಹೈಕೋರ್ಟ್ ಸಮಿತಿ ಹೇಳಿತ್ತು.