ನಾನು ಓದಿದ ಪುಸ್ತಕ - ಟಿಪ್ಪು ನಿಜ ಕನಸುಗಳು - ಸತ್ಯಸಂಗತಿಗಳ ಅನಾವರಣ ....

ನಿನ್ನೆ ಈ ಪುಸ್ತಕ ಸಿಕ್ಕನಂತರ ಎರಡು ತಾಸುಗಳಲ್ಲಿ ಇದನ್ನು ಓದಿ ಮುಗಿಸಿ ಕೆಳಗಿಟ್ಟಾಗ ಮನಸ್ಸು  ಉದಾಸವಾಯಿತು. ಸತ್ಯ ಸಂಗತಿಗಳನ್ನು ಇಲ್ಲಿ ನಾಟಕರೂಪದಲ್ಲಿ ಇಡಲಾಗಿದ್ದು ರಂಗಪ್ರಯೋಗಕ್ಕೆ ಅನುಕೂಲವಾಗುವಂತೆ ವಿಷಯಗಳನ್ನು ಸಂಭಾಷಣೆಗಳ ಮೂಲಕ ನಮ್ಮೆದುರು ಇಡುತ್ತ ಹೋಗಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಇದು ವಿವಾದಕ್ಕೊಳಗಾಗಿ ಕೋರ್ಟ್‌ ಕಟ್ಟೆಯನ್ನೂ ಹತ್ತಿ ಅಲ್ಲಿಂದ "ಸತ್ಯಮೇವ ಜಯತೇ"  ಎಂದು ಸಾರುತ್ತ ನಮ್ಮ ಕೈಗೆ ಬಂದ ಪುಸ್ತಕ.   

ಇದರಲ್ಲಿನ ಸಂಗತಿಗಳು ನಮಗೆ ಗೊತ್ತಿಲ್ಲವೆಂದಲ್ಲ. ಆದರೆ ಕಳೆದ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಎಡಪಂಥೀಯ ಧೋರಣೆಯ ಪ್ರಗತಿಪರರೆಂದುಕೊಳ್ಳುವವರಿಂದ ಅಧಿಕಾರಸ್ಥ ದುರುಳರು ಬರೆಸಿದ ಬಹುತೇಕ ಸುಳ್ಳು ಇತಿಹಾಸವನ್ನೇ ಪಠ್ಯದಲ್ಲೂ, ನಾಟಕ ಕತೆಕಾದಂಬರಿಗಳಲ್ಲೂ ಓದುತ್ತ ಬಂದ ನಮಗೆ ಇತಿಹಾಸದ ಇನ್ನೊಂದು ಮುಖ ಇತ್ತೀಚಿನ ಕೆಲ ವರುಷಗಳಲ್ಲಿ ನಮ್ಮೆದುರು ತೆರೆದುಕೊಳ್ಳುತ್ತಿರುವಂತೆ ಆಶ್ಚರ್ಯಾಘಾತವಾಗುವದು ಸಹಜ. ಕೆಲವರಿಗೆ ಸತ್ಯ ಹೊರಗೆ ಬರುತ್ತಿರುವ ಬಗ್ಗೆ ಕಳವಳವೂ ಆಗಬಹುದು. ಏಕೆಂದರೆ ಅವರೆಲ್ಲ ಒಂದು ರೀತಿ ಕೆಲವರ ಕುರಿತು ಅಂಧಭಕ್ತಿಯ ಅಭಿಮಾನ ಬೆಳೆಸಿಕೊಂಡು ಬಂದವರು. ಅವರಿಗೆ ಇತಿಹಾಸದ ಈ ಬದಲಾದ ಮುಖವನ್ನು ಜೀರ್ಣಿಸಿಕೊಳ್ಳಲು ಆಗಲಿಕ್ಕಿಲ್ಲ.   

ಸತ್ಯ ಕಹಿ ಎಂಬ ಮಾತು ಅನುಭವಜನ್ಯವಾದದ್ದು. ನಾವು ಇದನ್ನೇ ಓದುತ್ತ ಬರೆಯುತ್ತ ಅದೇ ನಿಜವೆಂದು ನಂಬುತ್ತ ಬಂದೆವು. ಏಕೆಂದರೆ ಅದು ಪಠ್ಯಪುಸ್ತಕ ತಾನೆ. ಓದುವದೂ ಅನಿವಾರ್ಯ. ದಿಲ್ಲಿಯ ಜೆಎನ್ಯುದಂತಹ ಅಪಾಯಕಾರಿ ಸ್ಥಳದಲ್ಲಿ ಹುಟ್ಟಿದ  ಸರಕಾರಿ ಕೃಪಾಪೋಷಿತ ಬುದ್ಧಿಜೀವಿ ಇತಿಹಾಸಕಾರರಿಂದ ಬರೆಸಲ್ಪಟ್ಟ ಈ ನಕಲಿ ಇತಿಹಾಸ ಪರಕೀಯರಾದ ಓರಂಗಜೇಬ, ತಘಲಕ್, ಟಿಪ್ಪು ಮೊದಲಾದವರನ್ನೆಲ್ಲ ವಿಜೃಂಭಿಸುವಂತೆ ಮಾಡಿ ನಮ್ಮವರ ಶೌರ್ಯ ಸಾಹಸದ ಕತೆಗಳ ಮೇಲೆ ಮುಸುಕೆಳೆಯುವ ದುಷ್ಟ ಕೆಲಸ ಮಾಡಿತು. ಹೌದು, ನಾವು ನಂಬಿದೆವು. ನಂಬಿ ಕೆಟ್ಟೆವು.  ಇಂಥವರಲ್ಲಿ ಕೆಲವರು ಜ್ಞಾನ ಪೀಠ, ಪದ್ಮಶ್ರೀ ಭೂಷಣ ಪ್ರಶಸ್ತಿಗಳಿಗೂ ಪಾತ್ರರಾದರು.    

ಸದ್ಯ ಈ "ಟಿಪ್ಪು ನಿಜ ಕನಸುಗಳು" ಆ ಟಿಪ್ಪುವಿನ ದೌರ್ಜನ್ಯದ ನಿಜರೂಪವನ್ನು  ಎಳೆಎಳೆಯಾಗಿ ಬಿಡಿಸುತ್ತ ಹೋಗುತ್ತದೆ. ಇಲ್ಲಿಯೂ ಆ ಕಾಲದಲ್ಲಿ ದಿವಾನನಾಗಿದ್ದ ಪೂರ್ಣಯ್ಯ ಮತ್ತು ನಕಲಿ ಇತಿಹಾಸ ದಾಖಲಿಸುತ್ತಹೋದ  ಕಿರ್ಮಾನಿ ನಡುವಿನ ಸಂಭಾಷಣೆಗಳು, ಬ್ರಿಟಿಷ ಮ್ಯೂಸಿಯಂ ನಲ್ಲಿದ್ದ ಟಿಪ್ಪು ಬರೆದ ಪತ್ರಗಳು, ಪ್ರಮುಖ ದಾಖಲೆಗಳಾಗಿ ಟಿಪ್ಪುವಿನ ನಿಜವಾದ ಕರಾಳ ಮುಖವನ್ನು ತೋರಿಸಿ ಕಂಗೆಡಿಸುತ್ತವೆ.   

ಈ ನಾಟಕದ ಪ್ರತಿಯೊಂದು ಅಂಶವೂ ಐತಿಹಾಸಿಕ ಸಾಕ್ಷ್ಯಾಧಾರಗಳಿಂದ ಕೂಡಿದ್ದು. ನಾಟಕಕಾರರು ಆ ದಾಖಲೆಗಳನ್ನು ಕೋರ್ಟಿನ ಎದುರು ಇಟ್ಟಿದ್ದರಿಂದಲೇ ಪುಸ್ತಕದ ನಿಷೇಧ ತೆರವಾದದ್ದು.  ನಮ್ಮ ಕೆಲ ತಥಾಕಥಿತ ಇತಿಹಾಸಕಾರರು ಎಷ್ಟೊಂದು ಸುಂದರವಾದ ಸುಳ್ಳುಗಳನ್ನು ಸೃಷ್ಟಿಸಿದ್ದರು  ಎನ್ನುವದನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಅದನ್ನೇ ಈ ವರೆಗೆ ನಂಬಿದ ನಮ್ಮ ಮೂರ್ಖತನದ ಅರಿವೂ ಆಗುತ್ತದೆ.  ಟಿಪ್ಪುವಿನ ಮೃತದೇಹದ ಹುಡುಕಾಟದೊಂದಿಗೆ ನಾಟಕ ಆರಂಭವಾಗಿ ಮತ್ತೆ ಹಿಂದಕ್ಕೆ ಹೋಗಿ ಟಿಪ್ಪುವಿನ ಆಡಳಿತ, ಅವನ ಧರ್ಮಾಂಧತೆ, ಮೇಲುಕೋಟೆ, ಕೊಡಗುಗಳಲ್ಲೆಲ್ಲ ನಡೆಸಿದ ನರಮೇಧ ಇತ್ಯಾದಿಗಳನ್ನು  ತಿಳಿಸುತ್ತ,  ಸಂಗಡ ಟಿಪ್ಪು ಶೃಂಗೇರಿ ಯಂತಹ  ಕೆಲವು ಹಿಂದೂ ಕ್ಷೇತ್ರಗಳನ್ನು ಹಾಗೇ ಬಿಟ್ಟಿದ್ದು, ಮತ್ತೆ ಅವಕ್ಕೆ ದಾನದೇಣಿಗೆ ನೀಡಿದ್ದಕ್ಕೆ ನಿಜವಾದ ಕಾರಣ ಏನು ಎನ್ನುವದನ್ನೂ ಹೇಳಲಾಗುತ್ತದೆ.    

ಸತ್ಯ ಸತ್ಯವೆ. ಕೆಲವರಿಗೆ ಸತ್ಯ ಹಿಡಿಸಲಿಕ್ಕಿಲ್ಲ.  ಅದಕ್ಕೆ ಯಾರೇನು ಮಾಡಲು ಸಾಧ್ಯ. ಅವರು ಸುಳ್ಳನ್ನೇ ಪ್ರೀತಿಸುತ್ತಾರೆ. ಆದರೆ ಸುಳ್ಳು ಕೆಲಕಾಲ ವಿಜೃಂಭಿಸಿ ಮಾಯವಾಗುತ್ತದೆ. ಸತ್ಯ ಶಾಶ್ವತವಾಗಿ ಉಳಿದು ಸುಳ್ಳುಗಾರರ ಮುಖವಾಡವನ್ನು ಜಗತ್ತಿಗೆ ತೋರಿಸುತ್ತದೆ. ಪಕ್ಷ, ತತ್ವ ಸಿದ್ಧಾಂತ, ಹಿಂದುತ್ವ, ಕೋಮುವಾದ ಎಲ್ಲಕ್ಕಿಂತ ಸತ್ಯ ಮುಖ್ಯ. ನಕಲಿ ಇತಿಹಾಸದ ಇಂತಹ ಒಂದೊಂದೇ ಮುಖವಾಡಗಳನ್ನು ಕಳಚುತ್ತ ಹೋಗುವ ಅಗತ್ಯವಿದೆ. ನಾಟಕಕಾರರು ಅಭಿನಂದನಾರ್ಹರು.   

- * * * -