ಹೈದರಾಬಾದ್: ಬೊನಲು ಉತ್ಸವದ ಪ್ರಯುಕ್ತ ಸಿಕಂದರಾಬಾದ್ ನಲ್ಲಿರುವ ಪ್ರಖ್ಯಾತ ಉಜ್ಜೈನಿ ಮಹಾಂಕಾಳಿ ದೇವಸ್ಥಾನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಭಾನುವಾರ ಭೇಟಿ ನೀಡಿದರು
ಕೇಂದ್ರ ಗೃಹ ಖಾತೆ ರಾಜ್ಯಸಚಿವ ಜಿ ಕಿಷನ್ ರೆಡ್ಡಿ, ತೆಲಂಗಾಣ ಸಚಿವ ಟಿ ಶ್ರೀನಿವಾಸ ಯಾದವ್, ಮಾಜಿ ಸಚಿವ ಬಂಡಾರು ದತ್ತಾತ್ರೇಯ ಮತ್ತಿತರು ಮುಖ್ಯಮಂತ್ರಿಯವರ ಜೊತೆಗೂಡಿ ದೇವಿಯ ದರ್ಶನ ಪಡೆದರು.
ಮಹಾಂಕಾಳಿಯ ದರ್ಶನಕ್ಕಾಗಿ ಮಹಾರಾಷ್ಟ್ರ ಹಾಗೂ ತೆಲಂಗಾಣದ ವಿವಿಧ ಭಾಗಗಳಿಂದ 3 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು. ಇಷ್ಟಾರ್ಥ ಸಿದ್ಧಿಗಾಗಿ ಮಹಿಳೆಯರು ಮಣ್ಣಿನ ಮಡಿಕೆಯಲ್ಲಿ ಅಕ್ಕಿ, ಹಾಲು, ಬೆಲ್ಲ ಸೇರಿದ ಮಾಡಿದ ನೈವೇದ್ಯವನ್ನು ತಯಾರಿಸಿ ದೇವಿಗೆ ಸಮರ್ಪಿಸುವುದು ಈ ಉತ್ಸವದ ವಿಶೇಷ.
ಲಕ್ಷಾಂತರ ಜನರು ಭೇಟಿ ನೀಡುವ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ದೇಗುಲದ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರತಿವರ್ಷ ಜುಲೈ-ಆಗಸ್ಟ್ ತಿಂಗಳಿನ ಆಷಾಢ ಮಾಸದಲ್ಲಿ ಬೊನಲು ಉತ್ಸವ ಆಚರಿಸಲಾಗುತ್ತದೆ. ಈ ಬಾರಿ ಜುಲೈ 7ರಿಂದ ಪ್ರಾರಂಭವಾಗಿರುವ ಉತ್ಸವ ಜುಲೈ 28ರಂದು ಮುಕ್ತಾಯವಾಗಲಿದೆ.