ಬೆಳಗಾವಿ, ಮೇ 30, ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಕಂಡುಬರುತ್ತಿರುವುದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇ-ಪಾಸ್ ಇಲ್ಲದೇ ಬರುತ್ತಿರುವವರನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕುಗನೊಳ್ಳಿ ಬಳಿ ಇರುವ ಅಂತರ್ ರಾಜ್ಯ ಚೆಕ್ ಪೋಸ್ಟ್ ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರನ್ನೂ ತಪಾಸಣೆ ನಡೆಸಿ ಅಗತ್ಯವಿದ್ದರೆ ಕ್ವಾರಂಟೈನ್ ಮಾಡಬೇಕು ಎಂದರು.
ಕೋವಿಡ್-19 ನಿಯಂತ್ರಣದಲ್ಲಿ ಗಡಿ ಭಾಗದ ಚೆಕ್ ಪೋಸ್ಟ್ ಪಾತ್ರ ಪ್ರಮುಖವಾಗಿದೆ. ಸೇವಾ ಸಿಂಧು ಮೂಲಕ ಇ-ಪಾಸ್ ಪಡೆದುಕೊಂಡು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ. ಕಳೆದ ವಾರದಿಂದ ಇ-ಪಾಸ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಮುಂದೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲಾಗುವುದು. ಜಿಲ್ಲಾಡಳಿತ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲರೂ ಹಗಲಿರುಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತಾರಾಜ್ಯ ಗಡಿಯ ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡುತ್ತಿರುವವರು ಯಾವುದೇ ಒತ್ತಡ ಅಥವಾ ವಶೀಲಿಗೆ ಮಣಿಯದೇ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್, ಆರೋಗ್ಯ ಸೇರಿದಂತೆ ಕೊರೊನಾ ವಾರಿಯರ್ಸ್ ಗಳಿಗೂ ಸೋಂಕು ಕಂಡುಬರುತ್ತಿರುವುದರಿಂದ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು. ಮಹಾರಾಷ್ಟ್ರ ರಾಜ್ಯದಿಂದ ಪ್ರತಿದಿನ ಆಗಮಿಸುವ ಜನರು ಹಾಗೂ ವಾಹನಗಳ ಸಂಖ್ಯೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ತುರ್ತು ಸಂದರ್ಭದಲ್ಲಿ ರಾಜ್ಯದ ಪೊಲೀಸ್ ಅತ್ಯುತ್ತಮ ಕಾರ್ಯನಿರ್ವಹಿಸಿದೆ. ರಾಜ್ಯದಲ್ಲಿ ಎಲ್ಲಾ ತಬ್ಲಿಘಿಗಳು ಹಾಗೂ ಅವರ ಸಂಪರ್ಕಿತರನ್ನು ಗುರುತಿಸಿ, ಚಿಕಿತ್ಸೆ ನೀಡುವ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಉತ್ತಮ ಕೆಲಸ ಆಗಿರುವುದರಿಂದ ಕೋವಿಡ್-19 ಸೋಂಕು ನಿಯಂತ್ರಣ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಜಾಗ್ರತೆಯಿಂದ ಕೆಲಸ ಮಾಡಬೇಕು ಎಂದು ಗೃಹ ಸಚಿವರು ತಿಳಿಸಿದರು.
ರಾಜ್ಯ ಪ್ರವೇಶಿಸುವ ಗೂಡ್ಸ್ ವಾಹನಗಳ ಚಾಲಕ ಮತ್ತು ಕ್ಲೀನರ್ ಅವರ ಆರೋಗ್ಯವನ್ನು ಕೂಡ ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಸೂಚಿಸಿದರು. ಆರೋಗ್ಯ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಎಲ್ಲರೂ ಕಡ್ಡಾಯವಾಗಿ ಪಿಪಿಇ ಬಳಸುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಿದರು.ಕೆಲಸದ ಅವಧಿಯನ್ನು ಎಂಟು ಗಂಟೆಗಳ ಶಿಫ್ಟ್ ಮಾಡಬೇಕು. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯ ಆರೋಗ್ಯವನ್ನು ಕೂಡ ತಕ್ಷಣವೇ ತಪಾಸಣೆ ನಡೆಸಬೇಕು ಎಂದು ಸಚಿವರು ಸೂಚನೆ ನೀಡಿದರು.ಇ-ಪಾಸ್ ಪರಿಶೀಲನೆ ಹಾಗೂ ಆರೋಗ್ಯ ತಪಾಸಣೆ ಕೌಂಟರ್ ಬಗ್ಗೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಿವರಿಸಿದರು. ಚೆಕ್ ಪೋಸ್ಟ್ ನಲ್ಲಿ ಕ್ವಾರಂಟೈನ್ ಮುದ್ರೆ, ದಿನಾಂಕ ಮುದ್ರೆ ಹಾಗೂ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆಯ ಬಗ್ಗೆ ರವೀಂದ್ರ ಕರಲಿಂಗಣ್ಣವರ ಮಾಹಿತಿಯನ್ನು ನೀಡಿದರು.ರಿಪೋರ್ಟಿಂಗ್ ಮಾದರಿಯನ್ನು ಆನ್ ಲೈನ್ ಮಾಡಿದರೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅದೇ ರೀತಿ ಇ-ಪಾಸ್ ವಿತರಿಸಿದ ಬಳಿಕ ಅದರ ಬಗ್ಗೆ ಚೆಕ್ ಪೋಸ್ಟ್ ಗೆ ಮಾಹಿತಿಯನ್ನು ನೀಡಿದರೆ ಪ್ರಯಾಣಿಕರ ತಪಾಸಣೆ ಸುಲಭವಾಗಲಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಸಚಿವರಿಗೆ ಮನವಿ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಚೆಕ್ ಪೋಸ್ಟ್ ನಲ್ಲಿ ಕಲ್ಪಿಸಲಾಗಿರುವ ಸಂಚಾರಿ ವಿಶ್ರಾಂತಿ ಗೃಹವನ್ನು ಸಚಿವರು ಪರಿಶೀಲಿಸಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಬೆಳಗಾವಿ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.