ನವದೆಹಲಿ, ಜುಲೈ 3: ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಸರೋಜ್ ಖಾನ್ ನಿಧನದಿಂದ ಚಿತ್ರ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸರೋಜ್ ಖಾನ್ ಹೃದಯಾಘಾತದಿಂದ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
"ಸರೋಜ್ ಖಾನ್ ಒಬ್ಬ ಪ್ರತಿಭಾನ್ವಿತ ನೃತ್ಯ ಸಂಯೋಜಕಿ, ಅವರು ತಮ್ಮ ಅಪ್ರತಿಮ ಕೆಲಸದಿಂದ ಎಲ್ಲರನ್ನೂ ಆಕರ್ಷಿಸಿದರು. ಮನರಂಜಿಸಿದರು. ಆಕೆಯ ನಿಧನದ ಬಗ್ಗೆ ತಿಳಿದು ಆಘಾತವಾಗಿದೆ. ಇದು ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ” ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
ಸಚಿವ ಪಿಯೂಷ್ ಗೋಯಲ್. “ಸರೋಜ್ ಖಾನ್ ನಿಧನದ ಬಗ್ಗೆ ತಿಳಿದು ಬೇಸರವಾಯಿತು.
ಆಕೆ ಉದಯೋನ್ಮುಖ ನೃತ್ಯಗಾರ್ತಿಯರಿಗೆ ಸ್ಫೂರ್ತಿಯಾಗಿರುತ್ತಾರೆ. ಬಾಲಿವುಡ್‌ನ ಹಲವಾರು ಅಪ್ರತಿಮ ನೃತ್ಯ ಪ್ರದರ್ಶನಗಳ ಹಿಂದಿನ ಕಲಾವಿದೆಯಾಗಿ ಅವರನ್ನು ಪ್ರೀತಿಯಿಂದ ಸ್ಮರಿಸಲಾಗುವುದು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪ. ” ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರ.ೆ
40 ವರ್ಷಗಳ ವೃತ್ತಿಜೀವನದಲ್ಲಿ ಸರೋಜ್ ಖಾನ್ ಅವರು 2000 ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಇದನ್ನು "ದಿ ಮದರ್ ಆಫ್ ಡ್ಯಾನ್ಸ್ / ಕೊರಿಯೋಗ್ರಫಿ ಇನ್ ಇಂಡಿಯಾ" ಎಂದು ಕರೆಯಲಾಗುತ್ತದೆ.
ಶ್ರೀದೇವಿ ಅಭಿನಯದಲ್ಲಿ ಮಿಸ್ಟರ್ ಇಂಡಿಯಾದ ‘ಹವಾ ಹವಾಯಿ’ (1987), ನಾಗಿನಾ (1986), ಚಾಂದಿನಿ (1989) ಹಾಗೂ ತೇಜಾಜ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅಭಿನಯದ ‘ಎಕ್ ದೋ ತೀನ್’ (1988) ‘ಟಮ್ಮಾ ಟಮ್ಮಾ ಲೋಗೆ’, ‘ಧಕ್ ಧಕ್ ಕರನೇ ಲಗಾ ಮೊದಲಾದ ಹಾಡುಗಳಿಗೆ ಅವರ ನೃತ್ಯ ಸಂಯೋಜನೆಯನ್ನು ಪ್ರೇಕ್ಷಕರು ಎಂದಿಗೂ ಮರೆಯದಂತಿದೆ.