ಬೋಡೋ ಶಾಂತಿ ಒಪ್ಪಂದ ಐತಿಹಾಸಿಕ: ನಡ್ಡಾ

ನವದೆಹಲಿ, ಫೆ 07, ಹೊಸ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಈಶಾನ್ಯ ರಾಜ್ಯಕ್ಕೆ ಆಗಮಿಸಿರುವ  ಬೆನ್ನಲ್ಲೇ, ಬೋಡೋ ಶಾಂತಿ ಒಪ್ಪಂದವು ಅಸ್ಸಾಂನಲ್ಲಿ "ಇತಿಹಾಸ ಸೃಷ್ಟಿಸಲು” ಸಜ್ಜಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಟ್ವೀಟ್ ಮಾಡಿದ್ದಾರೆ. "ಕೊಕ್ರಾಜರ್, ಅಸ್ಸಾಂ ಈ ಐತಿಹಾಸಿಕ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಕುತೂಹಲದಿಂದ ಎದುರು ನೋಡುತ್ತಿದೆ. ಬೋಡೋ ಶಾಂತಿ ಒಪ್ಪಂದವು ಅಸ್ಸಾಂನಲ್ಲಿ ಇತಿಹಾಸ ನಿರ್ಮಿಸಲು ಮತ್ತು ಉಗ್ರಗಾಮಿತ್ವದಿಂದ ಸಾಮೂಹಿಕ ಅಭಿವೃದ್ಧಿಗೆ ಪರಿವರ್ತನೆಗೊಳ್ಳಲು ಸಜ್ಜಾಗಿದೆ" ಎಂದು ನಡ್ಡಾ ಟ್ವಿಟರ್ ನಲ್ಲಿ ಹೇಳಿದ್ದಾರೆ.

ಪ್ರಧಾನ ಮಂತ್ರಿಯವರೂ ಸಹ ಬೆಳಿಗ್ಗೆ ಟ್ವೀಟ್ ಮಾಡಿದ್ದು,  "ನಾನು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡು ಕೊಕ್ರಜಾರ್‌ನಲ್ಲಿರುತ್ತೇನೆ. ಬೋಡೋ ಒಪ್ಪಂದಕ್ಕೆ ಯಶಸ್ವಿಯಾಗಿ ಸಹಿ ಹಾಕುವುದನ್ನು ನಾವು ಗುರುತಿಸುತ್ತೇವೆ, ಇದು ದಶಕಗಳಿಂದಲೂ ಮುಂದುವರೆದಿದ್ದ ಸಮಸ್ಯೆಯನ್ನು ಕೊನೆಗೊಳಿಸುತ್ತದೆ". "ಇದು ಶಾಂತಿ ಮತ್ತು ಪ್ರಗತಿಯ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ" ಎಂದು ಪ್ರಧಾನಿ ಗುರುವಾರ ಟ್ವೀಟ್ ಮಾಡಿದ್ದಾರೆ. "ಅಸ್ಸಾಂನಲ್ಲಿ ಹೊಸ ಉದಯ, ಹೊಸ ಚೈತನ್ಯ ಮತ್ತು ಹೊಸ ಭರವಸೆ. ಬೋಡೋ ಒಪ್ಪಂದವು ಯುವಜನರು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ" ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ಏತನ್ಮಧ್ಯೆ, ಬಿಜೆಪಿಯ ಮಾಜಿ ಮುಖ್ಯಸ್ಥ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹೀಗೆ ಬರೆದಿದ್ದಾರೆ - "ಮೋದಿ ಸರ್ಕಾರ ಹೊಸ ಭರವಸೆಗಳ ಸಂಕೇತವಾಗಿದೆ. ಬೋಡೋ ಶಾಂತಿ ಒಪ್ಪಂದವು ಪ್ರಧಾನಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವ ಮತ್ತು ಅಸ್ಸಾಂನಲ್ಲಿ ಶಾಶ್ವತ ಶಾಂತಿ ತರಲು ಅವರು ಮಾಡಿದ ಪ್ರಯತ್ನಗಳಿಗೆ ಮತ್ತೊಂದು ಸಾಕ್ಷಿಯಾಗಿದೆ ". ಎಂದು ಅಭಿಪ್ರಾಯಪಟ್ಟಿರುತ್ತಾರೆ. ಕೇಂದ್ರ ಸರ್ಕಾರವು ಜನವರಿ 27 ರಂದು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊರೊಲ್ಯಾಂಡ್ (ಎನ್‌ಡಿಎಫ್‌ಬಿ) ಯ ಬಣಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ರಾಜಕೀಯ ಮತ್ತು ಆರ್ಥಿಕ ಲಾಭವನ್ನು ನೀಡುವ ನಿರೀಕ್ಷೆಯಿದೆ.

 ಪ್ರತ್ಯೇಕ ಬೋಡೋಲ್ಯಾಂಡ್‌ಗಾಗಿ ಚಳವಳಿಯ ನೇತೃತ್ವ ವಹಿಸಿರುವ ಪ್ರಭಾವಿ ಆಲ್ ಬೋಡೋ ವಿದ್ಯಾರ್ಥಿ ಸಂಘ (ಎಬಿಎಸ್‌ಯು) ಸಹ ಒಪ್ಪಂದಕ್ಕೆ ಸಹಿ ಹಾಕಿತು.ಬೋಡೋ ಶಾಂತಿ ಒಪ್ಪಂದವನ್ನು ಆಚರಿಸಲು ಕೊಕ್ರಜಾರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಹಬ್ಬದ ವಾತಾವರಣವಿತ್ತು.ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ (ಎಬಿಎಸ್‌ಯು) ಮತ್ತು ಎನ್‌ಡಿಎಫ್‌ಬಿ ಇಂದು ಕೊಕ್ರಜಾರ್‌ನಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಿವೆ, ಇದರಲ್ಲಿ ಹೆಚ್ಚಿನ ಸಂಖ್ಯೆಯ ಎಬಿಎಸ್‌ಯು ಮತ್ತು ಎನ್‌ಡಿಎಫ್‌ಬಿ ಕಾರ್ಯಕರ್ತರು ಭಾಗವಹಿಸಿದ್ದರು.ಕೊಕ್ರಜಾರ್ ನಿವಾಸಿಗಳು ಗುರುವಾರ ಸಂಜೆ ಒಂದು ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ಈ ಪ್ರದೇಶದಲ್ಲಿ ಒಟ್ಟಾರೆ ಶಾಂತಿಗಾಗಿ ಪ್ರಾರ್ಥಿಸಿದರು.