ಬೆಂಗಳೂರು, ಜೂನ್ 14: ಪಿಯುಸಿವರೆಗೂ ತಮಗೆ ರಕ್ತದಾನ ಮಹತ್ವದ ಕುರಿತು ಅರಿವಿರಲಿಲ್ಲ ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ರವಿ.ಡಿ.ಚನ್ನಣ್ಣವರ್ ಹೇಳಿದ್ದಾರೆ
ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯು ನಗರದ ಜೀನ್ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಕ್ಕವರಿದಾಗ ರಕ್ತದಾನ ಮಾಡಿದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ನಂಬಿಕೆ ಮೂಡಿಸಲಾಗಿತ್ತು. ಪಿಯುಸಿ ಓದುತ್ತಿದ್ದಾಗ 'ರಕ್ತ ದಿನದ ಮಹತ್ವದ ಕುರಿತು ಸ್ಪರ್ಧೆ ಏರ್ಪಡಿಸಲಾಗಿತ್ತು. ಆಗಲೇ ತಮಗೆ ರಕ್ತದಾನದ ಕುರಿತು ತಿಳುವಳಿಕೆ ಮೂಡಿದ್ದು. ವಿದ್ಯಾರ್ಥಿಯಾಗಿ 12 ವರ್ಷಗಳ ಕಾಲ ರಕ್ತದ ಮಹತ್ವದ ಕುರಿತು ಅರಿವಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ವಿಚಾರಗಳನ್ನು ನಾಗರಿಕರಿಗೆ ತಲುಪಿಸುವ ಅಗತ್ಯವಿದೆ ಎಂದರು.
ಈಗಾಗಲೇ ಸರ್ಕಾರ ಹಾಗೂ ಸರ್ಕಾರರೇತರ ಸಂಸ್ಥೆಗಳು ಈ ಸೇವೆಯಲ್ಲಿ ಕಾರ್ಯನಿರತವಾಗಿವೆ. ರಕ್ತದಾನ ಮಾಡುವುದು ಮಾನವನ ದೊಡ್ಡ ಗುಣ. ಕಿರಿಯರು ದೊಡ್ಡವರನ್ನು ನೋಡಿ ಅನುಸರಿಸುವುದರಿಂದ ಇಂತಹ ಒಳ್ಳೆಯ ಕಾರ್ಯಗಳು ಆಗುತ್ತಲೇ ಇರಬೇಕು. ರಕ್ತದ ಗುಂಪು ಕಂಡುಹಿಡಿದ ಡಾ.ಕಾಲ್ಸ್ ಲ್ಯಾಂಡ್ ಸ್ಟೇನರ್ ಅವರಂತಹ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಜ್ಯ ಶಾಖೆಯ ಉಪಸಭಾಪತಿ ಡಾ.ವಿಎಲ್ಎಸ್ ಕುಮಾರ್ ಮಾತನಾಡಿ, 19ನೇ ಶತಮಾನಕ್ಕಿಂತ ಪೂರ್ವದಲ್ಲಿ ರಕ್ತವನ್ನು ಬೇರೆಯವರಿಗೆ ದಾನ ಮಾಡಿದರೆ, ಅದರಲ್ಲಿ ಕೆಲವರು ಬದುಕುತ್ತಿದ್ದರು, ಇನ್ನು ಕೆಲವರು ಸಾವನ್ನಪ್ಪುತ್ತಿದ್ದರು. ಇದರ ಕುರಿತು ಡಾ.ಕಾರ್ಲ್ ಲ್ಯಾಂಡ್ ಸ್ಟೇನರ್ ಗಂಭೀರ ಚಿಂತನೆ ನಡೆಸಿ ಎ.ಬಿ.ಒ ರಕ್ತದ ಗುಂಪನ್ನು ಕಂಡುಹಿಡಿದರು. ಅವರ ಜನ್ಮದಿನದ ಸ್ಮರಣಾರ್ಥ ವಿಶ್ವ ಆರೋಗ್ಯ ಸಂಸ್ಥೆಯು 2004ರಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಬೇಕು ಎಂದು ಘೋಷಿಸಿತು. ಪ್ರಸ್ತುತ 'ಸರ್ವರಿಗೂ ಸುರಕ್ಷಿತ ರಕ್ತ' ಘೋಷ ವಾಕ್ಯದಡಿ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮಿಂಟೋ ಕಣ್ಣಿನ ಆಸ್ಪತ್ರೆ ನಿದರ್ೆಶಕಿ ಡಾ.ಬಿ.ಎಲ್.ಸುಜಾತ ರಾಥೋಡ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಆಚರಿಸಲಾಗುತ್ತಿರುವ ವಿವಿಧ ದಿನಾಚರಣೆಗಳ ಪೈಕಿ ಇದು ಒಂದಾಗಿದೆ. ರಕ್ತ ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಆಫ್ರಿಕಾ ದೇಶದಲ್ಲಿ ಮಲೇರಿಯಾ ರೋಗದಿಂದ ರಕ್ತಸ್ರಾವವಾಗಿ ಅನೇಕ ಮಕ್ಕಳು ಸಾವನ್ನಪ್ಪುತ್ತಾರೆ. ಅಂತಹ ಮಕ್ಕಳಿಗೆ ರಕ್ತದ ಅವಶ್ಯಕತೆ ಇದೆ ಎಂದರು.
ರಕ್ತದಾನ ಶ್ರೇಷ್ಠ ದಾನ ಅವಶ್ಯಕತೆ ಇದ್ದಾಗ ರಕ್ತ ನೀಡಿದರೆ, ಅದರ ಮಹತ್ವದ ಕುರಿತು ಅರಿವಾಗುತ್ತದೆ. ರಕ್ತದಾನ ಮಾಡುವುದು ಎಲ್ಲಾ ನಾಗರಿಕರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ 25ಕ್ಕಿಂತ ಅಧಿಕ ಬಾರಿ ರಕ್ತದಾನ ಮಾಡಿದ 14 ಜನರನ್ನು ಅವರ ಸೇವೆ ಹಾಗೂ ಬದ್ಧತೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ದಕ್ಷಿಣ ಪ್ರವರ್ಣ ಕೇಂದ್ರದ ಸೈನಿಕರು ರಕ್ತದಾನ ಮಾಡಿದರು.
ದಕ್ಷಿಣ ಪ್ರವರ್ಣ ಕೇಂದ್ರ ಕಮಾಂಡೆಂಟ್ ಮೇಜರ್ ಜನರಲ್ ಎನ್.ಜೆ.ಜಾರ್ಜ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕನರ್ಾಟಕ ರಾಜ್ಯ ಶಾಖೆಯ ಸಭಾಪತಿ ಎಸ್.ನಾಗಣ್ಣ ಮತ್ತಿತರು ಉಪಸ್ಥಿರಿದ್ದರು.