ಐನಾಪೂರದಲ್ಲಿ ರಕ್ತದಾನ ಶಿಬಿರ

ಐನಾಪೂರದಲ್ಲಿ ರಕ್ತದಾನ ಶಿಬಿರ Blood donation camp in Ainapur

ಲೋಕದರ್ಶನ ವರದಿ 

ಕಾಗವಾಡ 03 : ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರು-ಶಿಷ್ಯರ ನಮನವೆಂಬ ವಿಶೇಷ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಈ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಶಿಕ್ಷಕರನ್ನು ಸ್ಮರಿಸುವ ಜೊತೆಗೆ ಅನೇಕ ಜನರ ಜೀವ ಉಳಿಸಿದಂತಾಗುತ್ತದೆ ಎಂದು ತಾಲೂಕಾ ಪಂಚಾಯತ್ ಇಓ ವೀರಣ್ಣಾ ವಾಲಿ ತಿಳಿಸಿದ್ದಾರೆ. 

ಅವರು, ಗುರುವಾರ ದಿನಾಂಕ 3 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ತಾಲೂಕಾಡಳಿತ, ತಾಲೂಕಾ ಪಂಚಾಯತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಇವರ ಸಂಯುಕ್ತಾಶ್ರದಲ್ಲಿ ಐನಾಪೂರ ಪಟ್ಟಣದ ಕೆಆರ್‌ಎಸ್ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು. ಸ್ವಯಂಪ್ರೇರಣೆಯಿಂದ ನಡೆಯುತ್ತಿರುವ ಈ ರಕ್ತದಾನ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಹೆಸರು ನೊಂದಾಯಿಸಿದ್ದು, ಈಗಾಗಲೇ ಸುಮಾರು 20 ಜನ ರಕ್ತದಾನ ಮಾಡಿದ್ದಾರೆ. ಸಂಜೆ ವರೆಗೆ ಈ ಅಂಕಿ ಎರಡು ನೂರು ದಾಟುವ ನೀರೀಕ್ಷೆ ಇದೆ ಎಂದರು. 

ಬಿಇಓ ಚನ್ನಿಗರಾಮಯ್ಯ ಮಾತನಾಡಿ, ರಕ್ತದಾನ ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿ, ಅನೇಕ ಜನರಿಗೆ ನೆರವಾಗುವ ಜೊತೆಗೆ ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ. ರಕ್ತದಾನ ಮಾಡಿ, ಶಿಕ್ಷಕರ ಸ್ಮರಿಸುವ ಈ ವಿನೂತನ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿ ಸೋಣವೆಂದರು.  ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಮುಖಂಡರಾದ ಪ್ರವೀಣ ಗಾಣಿಗೇರ, ಸಂಜಯ ಭಿರಡಿ, ದಾದಾ ಜಂತೆನ್ನವರ, ಸಿಡಿಪಿಓ ಸಂಜೀವಕುಮಾರ ಸದಲಗೆ,

ಜಿಲ್ಲಾ ನೊಡಲ್ ಅಧಿಕಾರಿ ಕೆ.ಬಿ. ತಳವಾರ, ವೈದ್ಯಾಧಿಕಾರಿ ಡಾ. ವಿಕಾಸ ಕಾರ್ಚಿ, ಸಿಆರ್‌ಸಿ ಪಾಂಡುರಂಗ ಮಧಬಾವಿ, ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ, ಎ.ಡಿ. ಅನ್ಸಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಎಸ್‌. ಭಾವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಗಾಣಿಗೇರ, ಕೆಆರ್‌ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ಎಸ್‌. ಹುಲ್ಲೇನ್ನವರ, ಭರತ ಭಿಲವಡೆ, ಎಂ.ಜಿ. ಸಂಕಪಾಳ, ದಾದಾ ಪಾಟೀಲ, ರಾಜೇಂದ್ರ ಪೋತದಾರ, ಎಂ.ಎಸ್‌. ಕಾಂಬಳೆ ಸೇರಿದಂತೆ ಶಿಕ್ಷಕರು, ಪಿಡಿಓಗಳು, ಗ್ರಾಮ ಆಡಳಿತಾಧಿಕಾರಿಗಳು ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.