ಹಿಮಪಾತ, ಭೂಕುಸಿತ : ಶ್ರೀನಗರ-ಜಮ್ಮು ಹೆದ್ದಾರಿ ಸ್ಥಗಿತ

ಶ್ರೀನಗರ, ಡಿಸೆಂಬರ್ 16 ಹಿಮಪಾತ  ಮತ್ತು ಅನೆಕ ಕಡೆ ತೀವ್ರ ಭೂಕುಸಿತದ ಪರಿಣಾಮ  ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ   ಸಂಚಾರ ಸ್ಥಗಿತವಾಗಿದ್ದು ,ಕಾಶ್ಮೀರ ಕಣಿವೆ ಸೋಮವಾರ ನಾಲ್ಕನೇ ದಿನವೂ ದೇಶದ ಇತರ ಭಾಗಗಳಿಂದ ಸಂಪರ್ಕಕಡಿದುಕೊಂಡಿದೆ.  ಸತತ ಆರನೇ ದಿನವೂ  ಹಿಮಪಾತದಿಂದಾಗಿ ಐತಿಹಾಸಿಕ 86 ಕಿ.ಮೀ ಉದ್ದದ ಮೊಘಲ್ ರಸ್ತೆ ಮತ್ತು ಅನಂತ್‌ನಾಗ್-ಕಿಶ್ತ್ವಾರ್ ರಸ್ತೆ  ಸಂಚಾರ ಸ್ಥಗಿತವಾಗಿದೆ   ಎಂದು ಸಂಚಾರಿ  ಪೊಲೀಸ್ ಅಧಿಕಾರಿಯೊಬ್ಬರು ಯುಎನ್‌ಐ ಸುದ್ದಿ ಸಂಸ್ಥೆಗೆ  ತಿಳಿಸಿದ್ದಾರೆ.ಈ ನಡುವೆ  ಲಡಾಖ್ ಪ್ರದೇಶದ ಕೇಂದ್ರಾಡಳಿತ ಪ್ರದೇಶವನ್ನು  ಕಾಶ್ಮೀರ ಕಣಿವೆಯೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆ  ರಾಷ್ಟ್ರೀಯ ಹೆದ್ದಾರಿ ಕಳೆದ ಆರು ದಿನಗಳಿಂದ ಸ್ಥಗಿತವಾಗಿದೆ. ಕಾಶ್ಮೀರದ ವಿಭಾಗೀಯ ಆಯುಕ್ತರು ಚಳಿಗಾಲದ ಕಾರಣ ಒಂದು ತಿಂಗಳು ಹೆದ್ದಾರಿ  ಮುಚ್ಚುವುದಾಗಿ ಘೋಷಿಸಿದ್ದಾರೆ. ಆದರೆ, ಚಳಿಗಾಲದಲ್ಲಿ  ಹೆದ್ದಾರಿಯನ್ನು ಮುಚ್ಚುವ  ಘೋಷಣೆ ಮಾಡುವ  ಮೊದಲು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕೇಂದ್ರ ಪ್ರಾಂತ್ಯ  ಲಡಾಖ್ ಅಧಿಕಾರಿಗಳು ತಿಳಿಸಿದ್ದಾರೆ.ಭೂಕುಸಿತವನ್ನು ತೆರವುಗೊಳಿಸಿದ ನಂತರ ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರವನ್ನು ನಿನ್ನೆಯಿಂದ ಪುನರ್ ಸ್ಥಾಪಿಸಲಾಗಿತ್ತಾದರೂ  ಹೆದ್ದಾರಿಯ  ಶೈತಾನಿ ನಲ್ಲಾ ಪ್ರದೇಶದಲ್ಲಿ ಭಾರಿ ಭೂಕುಸಿತಕ್ಕೆ ವಾಹನ ಸಿಕ್ಕಿ ಸಿಆರ್‌ಪಿಎಫ್ ಉತ್ತರ ಕಾಶ್ಮೀರದ ಡಿಐಜಿ   ಶಿಲಾಂದರ್ ಕುಮಾರ್ ಮತ್ತು ಅವರ ಚಾಲಕ ನವೀನ್ ಸಾವನ್ನಪ್ಪಿದ್ದಾರೆ. ಅವರ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಗಾಯಗೊಂಡಿದ್ದು, ಅವರನ್ನು ಉದಂಪೂರ್‌ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಡಿಗ್ಡಾಲ್, ಪೆಂಥಾಲ್ ಮತ್ತು ಇತರ ಸ್ಥಳಗಳಲ್ಲಿ ಹೊಸದಾಗಿ  ಭೂಕುಸಿತದ ಹಿನ್ನೆಲೆಯಲ್ಲಿ ಮತ್ತೆ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಿಮಪಾತ ಮತ್ತು ಜಾರು ರಸ್ತೆ ಪರಿಸ್ಥಿತಿಯ ಕಾರಣಕ್ಕಾಗಿ  ದಕ್ಷಿಣ ಕಾಶ್ಮೀರದ ಶೋಪಿಯಾನ್ ಅನ್ನು ರಾಜೌರಿ ಮತ್ತು ಜಮ್ಮು ಪ್ರದೇಶದ ಪೂಂಚ್‌ನೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆ 6 ದಿನವಾದ  ಸೋಮವಾರವೂ  ಮುಚ್ಚಿದೆ  ಎಂದು  ಪೊಲೀಸ್ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.ಮೊಘಲ್ ರಸ್ತೆಯಲ್ಲಿ, ವಿಶೇಷವಾಗಿ ಹಾರ್ಪೋರಾ, ಪಿರ್-ಕಿ-ಗಾಲಿ ಮತ್ತು ಇತರ ಪ್ರದೇಶಗಳಲ್ಲಿ ಮೂರರಿಂದ ಐದು ಅಡಿಗಳಷ್ಟು ಹಿಮಪಾತವಾಗಿದೆ.