ಬೆಂಗಳೂರು 10: ಕನ್ನಡ ರಂಗಭೂಮಿಯ ದಿಗ್ಗಜರಲ್ಲೊಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಡಾ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಮಾಜಿ ಸಚಿವೆ ಉಮಾಶ್ರೀ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಅವರ ಸಾವಿನ ಸುದ್ದಿ ಆಘಾತಕಾರಿಯಾಗಿದ್ದು, ಇದು ಕನ್ನಡ ರಂಗಭೂಮಿಯ ಕರಾಳ ದಿನ ಎಂದು ನಾನು ಭಾವಿಸಿದ್ದೇನೆ ಎಂದು ಕನ್ನಡ ಹಿರಿಯ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ನಾನು ಸ್ವತಃ ಅವರ ಯಯಾತಿ ನಾಟಕದಲ್ಲಿ ನಟಿಸಿದ್ದೆ. ಆರ್ ನಾಗೇಶ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದರು. ಅದರಲ್ಲಿ ನಾನು ಶರ್ಮಿಷ್ಠೆಯಾಗಿ ಅಭಿನಯಿಸಿದ್ದು , ನನಗೆ ಕಾರ್ನಾಡ್ ಅವರೊಳಗಿದ್ದ ಮಹಿಳಾ ಸಂವೇದನೆಯನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಕಾರ್ನಾಡ್ರ ನಾಟಕದಲ್ಲಿ ಅಭಿನಯಿಸುವ ಧನ್ಯತೆ ನನಗೆ ಸಿಕ್ಕಿತು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕನ್ನಡ ರಂಗಭೂಮಿಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಅದ್ಭುತ ನಾಟಕಕಾರ ಡಾ ಕಾರ್ನಾಡ್. ಅವರ ಎಲ್ಲ ನಾಟಕಗಳು ಕನ್ನಡ ರಂಗಭೂಮಿಯ ದಿಕ್ಕು ದೆಸೆಯನ್ನು ಬದಲಿಸಿ ಹೊಸ ದೃಷ್ಟಿಕೋನದಿಂದ ಕಲೆಯನ್ನು ನೋಡುವುದನ್ನು ಕಲಿಸಿದವು.
ಅವರ ಯಯಾತಿ, ತುಘಲಕ್, ತಲೆದಂಡ, ಅಗ್ನಿ ಮತ್ತು ಮಳೆ, ಒಡಕಲು ಬಿಂಬ, ಹಯವದನ, ಟಿಪ್ಪುವಿನ ಕನಸುಗಳು ಮುಂತಾದ ನಾಟಕಗಳು ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದವು. ತುಘಲಕ್, ನಾಗಮಂಡಲ ಮತ್ತು ತಲೆದಂಡ ಅವರು ಸಾರ್ವಕಾಲಿಕ ಶ್ರೇಷ್ಠ ನಾಟಕ ಎಂದು ರಂಗ ಜಗತ್ತು ಕೊಂಡಾಡಿದೆ ಎಂದು ಉಮಾಶ್ರೀ ತಿಳಿಸಿದ್ದಾರೆ ಗಿರೀಶ್ ಕಾರ್ನಾಡ್ ಶ್ರೇಷ್ಠ ನಾಟಕಗಾರ ಜೊತೆಗೆ ಶ್ರೇಷ್ಠ ನಟರು,ನಿರ್ದೇಶಕರೂ ಆಗಿದ್ದರು. ವಂಶವೃಕ್ಷ, ಸಂಸ್ಕಾರ, ತಬ್ಬಲಿ ನೀನಾದೆ ಮಗನೇ, ಒಂದಾನೊಂದು ಕಾಲದಲ್ಲಿ, ಉತ್ಸವ, ಕಾನೂರು ಹೆಗ್ಗಡತಿ ಮುಂತಾದ ಚಿತ್ರಗಳು ಅವರ ಸೂಕ್ಷ್ಮ ಸಂವೇದನೆ ಮತ್ತು ಪ್ರಗತಿಪರ ದೃಷ್ಟಿಕೋನದ ಮೂಲಕ ರಾಷ್ಟ್ರದ ಚಲನಚಿತ್ರ ರಂಗ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದವು. ಕಾರ್ನಾಡ್ ಅವರ ನಾಟಕಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಅನುವಾದಗೊಂಡು ಪ್ರದರ್ಶನಗೊಂಡಿವೆ. ಅನೇಕ ಭಾರತೀಯ ಭಾಷಾ ಚಲನಚಿತ್ರಗಳಲ್ಲಿಯೂ ಗಿರೀಶ್ ಕಾರ್ನಾಡ್ ನಟಿಸಿದ್ದಾರೆ. ಕಾರ್ನಾಡ ಎಂದೂ ವಿವಾದಗಳಿಗೆ ಹೆಸರಾದವರಲ್ಲ. ಅವರು ತನ್ನ ನಿಲುವುಗಳನ್ನು ಬಹಳ ಖಡಾಖಂಡಿತವಾಗಿ ಪ್ರತಿಪಾದಿಸಿದವರು ಹಾಗೂ ಅವರು ಅನೇಕ ಪ್ರತಿರೋಧವನ್ನು ಎದುರಿಸಬೇಕಾಗಿ ಬಂತು, ಆದರೆ ಅದನ್ನೆಲ್ಲಾ ಎದುರಿಸಿ ಕಾರ್ನಾಡ್ ಎಂದು ತಮ್ಮ ವಿಚಾರಧಾರೆಯೊಂದಿಗೆ ರಾಜಿ ಮಾಡಿಕೊಂಡವರಲ್ಲ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕಾರ್ನಾಡ ಅವರಿಗೆ ಸಂದ ಗೌರವಗಳು ಬಹಳ ದೊಡ್ಡವು. ಪದ್ಮಶ್ರೀ, ಪದ್ಮ ವಿಭೂಷಣ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿ ಪುರಸ್ಕಾರಗಳು ಗಿರೀಶ್ ಕಾರ್ನಾಡ್ ಅವರಿಗೆ ಸಂದಿವೆ. ಕಾರ್ನಾಡ್ ಅವರ ನಿಧನದಿಂದ ಕನ್ನಡ ರಂಗ ಭೂಮಿ ಒಂದು ದೊಡ್ಡ ಶೂನ್ಯ ಉಂಟಾಗಿದೆ. ಅದನ್ನು ತುಂಬುವುದು ತುಂಬಾ ಕಷ್ಟ ಎಂದು ಉಮಾಶ್ರೀ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.