ಪಕ್ಷಿ ಸಂಕುಲ ಇಂದು ಅಳಿವಿನ ಅಂಚಿನಲ್ಲಿದೆ : ಡಾ. ಎಂ. ಎಂ ಮೃತ್ಯುಂಜಯ
ರಾಣಿಬೆನ್ನೂರ 20: ಈ ಹಿಂದೆ ಮನೆಯಂಗಳದಲ್ಲಿ ಚಿಲಿಪಿಲಿ ಗುಟ್ಟುವ ಗುಬ್ಬಚ್ಚಿಗಳ ಇಂಚರ ಇಂದು ಕಾಣದಾಗಿದೆ, ಇದಕ್ಕೆ ಕಾರಣ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ಕೊರತೆ ಮತ್ತು ಮನುಷ್ಯನ ದುರಾಸೆ. ಪಕ್ಷಿ ಸಂಕುಲ ಇಂದು ಅಳಿವಿನ ಅಂಚಿನಲ್ಲಿದೆ ಎಂದು ಪ್ರಾಚಾರ್ಯ ಡಾ. ಎಂ. ಎಂ ಮೃತ್ಯುಂಜಯ ಹೇಳಿದರು. ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಶುಕ್ರವಾರ ನೆಡೆದ ಬಿಸಿಲಿನ ಬೇಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳನ್ನು ಪ್ರಾಣಿ ಪಕ್ಷಿಗಳು ತಿಂದು ಬಿಡುತ್ತವೆ ಎಂದು ರೈತರು ಅಳವಡಿಸಿದ ಬಲೆಗೆ ಬಿದ್ದು ಸಾಯುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ಮಕ್ಕಳಿರಲವ್ವ ಮನೆ ತುಂಬ ಎಂಬಂತೆ ಪಕ್ಷಿಗಳಿರಲವ್ವ ಮನೆ ಸುತ್ತ ಮುತ್ತ ಎಂಬ ತತ್ವವನ್ನು ಪ್ರಶಿಕ್ಷಣಾರ್ಥಿಗಳು ಬೆಳೆಸಿಕೊಳ್ಳಬೇಕು. ಎನ್‌ಎಸ್‌ಎಸ್ ಘಟಕದ ಅಡಿಯಲ್ಲಿ ಆಯೋಜಿಸಿರುವ ಪ್ರಾಣಿ ಪಕ್ಷಿಗಳಿಗೆ ನೀರು ಆಹಾರ ಒದಗಿಸುವ ಜಾಗೃತಿ ಜಾಥಾ ಕಾರ್ಯ ಸ್ಪೂರ್ತಿದಾಯಕ ಶ್ಲಾಘನೀಯವಾದದ್ದು ಎಂದರು. ಪ್ರೊ. ಪರಶುರಾಮ ಪವಾರ ಮಾತನಾಡಿ, ಅಮೂಲ್ಯ ಪಕ್ಷಿ ಸಂಪತ್ತು ನಮ್ಮ ಆಸ್ತಿ ವಿದ್ಯಾರ್ಥಿಗಳು ನಿಸರ್ಗದ ಕಡೆ ಸಾಗಬೇಕು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೇ ಮಕ್ಕಳಿಗೆ ಜೀವ ಸಂಕುಲಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿರಬೇಕು ಎಂದರು. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ತಂದು ಅವುಗಳನ್ನು ಉಪಯುಕ್ತ ರೀತಿಯಲ್ಲಿ ಬಳಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಜಾಗೃತಿಯ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು. ಬೀರ್ಪ ಲಮಾಣಿ, ರುಕ್ಮಿಣಿ, ಉಮಾ ಕಂಬಳಿ, ಲಕ್ಷ್ಮೀ ಹಣಚಿಕಿ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಸ್ವಯಂ ಸೇವಕರು ಜಾಥಾದಲ್ಲಿ ಇದ್ದರು.