ಜೇಸಿ ಶಾಲೆಯಿಂದ 35ವರ್ಷಗಳಲ್ಲಿ ದೊಡ್ಡ ಕ್ರಾಂತಿ: ಶೀಲಾ ಭಾವಿಕಟ್ಟಿ

Biggest revolution in 35 years from Jaycee School: Sheela Bhavikatti

ದೇಶೀ ಶಾಲೆಯ ದೇಶೀ ಉತ್ಸವ 

ಮಹಾಲಿಂಗಪುರ 17: ಭರತನಾಟ್ಯ, ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ, ಕೋಲಾಟ, ಹುಲಿಕುಣಿತ, ಕುದುರೆ ಕುಣಿತ, ಯಕ್ಷಗಾನ, ಕಾಂತಾರ ದೈವ ಮುಂತಾದ ಸಾಂಪ್ರದಾಯಿಕ ನೃತ್ಯಗಳ ಸಂಯೋಜಿತ ನೃತ್ಯ ಹಾಗೂ ಎಲ್‌ಕೆಜಿ,ಯುಕೆಜಿ ಮಕ್ಕಳ ಶ್ರೀವಿಷ್ಣುವಿನ ದಶಾವತಾರ ಜೇಸಿ ಶಾಲೆಯ 35ನೇ ವರ್ಷದ ಉತ್ಸವ ದೇಶೀ ಉತ್ಸವವಾಗಿ ಮೆರೆಯುವವಂತೆ ಮಾಡುವಲ್ಲಿ ಯಶಸ್ವಿಯಾದವು  

ಇತ್ತೀಚಿಗೆ ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಅಪಘಾತದಲ್ಲಿ ವೀರಮರಣವಪ್ಪಿದ ಸ್ಥಳೀಯ ಯೋಧ ಮಹೇಶ ಮರೆಗೊಂಡ ಅವರ ಪತ್ನಿ ಮತ್ತು ಕುಟುಂಬದವರನ್ನು ವೇದಿಕೆಗೆ ಕರೆತಂದು ಗೌರವಿಸುವ ಭಾವನಾತ್ಮಕ ಸನ್ನಿವೇಶದ 3ನೇ ವರ್ಗದ ಚಿಕ್ಕಮಕ್ಕಳ ನೃತ್ಯ ಪ್ರೇಕ್ಷಕರೆದೆಯಲ್ಲಿ ದುಃಖ ಉಮ್ಮಳಿಸುವಂತೆ ಮಾಡಿದವು, ಜೇಸಿ ಭಕ್ತಪ್ರಹ್ಲಾದ ಕಿರುನಾಟಕ ರಂಗ ಸಂಸ್ಕೃತಿಯ ವೈಭವವನ್ನು ಮರುಕಳಿಸಿತು. ಈ ರೀತಿ ಭಿನ್ನವಿಭಿನ್ನ 35ಕ್ಕೂ ಅಧಿಕ  ನೃತ್ಯ , ರೂಪಕಗಳು ಆಂಗ್ಲ ಮಾಧ್ಯಮ ಶಾಲೆಯಾದರೂ ಜೇಸಿ ಶಾಲೆ ಮಾಡುತ್ತಿರುವ ನಾಡು, ನುಡಿ ಹಾಗೂ ಸನಾತನ ಸಂಸ್ಕೃತಿ, ಸಂಪ್ರದಾಯಗಳ ಸಂದೇಶಗಳನ್ನು ಗಟ್ಟಿಧ್ವನಿಯಲ್ಲಿ ಭಿತ್ತರಿಸುವ ಮೂಲಕ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.  

ಇದೇ ವೇದಿಕೆಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಚಿಕಾಗೋ ಭಾಷಣ ಪ್ರದರ್ಶನ ಅರ್ಥಪೂರ್ಣವಾಗಿತ್ತು. 

ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಮಾತನಾಡಿದರು, ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಉದ್ಘಾಟಿಸಿದರು, ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಗುರುರಾಜ ಅಂಬಿ, ನಿರ್ದೇಶಕರಾದ ಈಶ್ವರ ಮುರಗೋಡ, ರಮೇಶ ಮುಳವಾಡ, ರಾಜು ಘಟ್ಟೆಪ್ಪನವರ, ಮುಖ್ಯಗುರುಗಳಾದ ಎಸ್‌.ಜಿ.ಕೌಜಲಗಿ, ನಾರನಗೌಡ ಉತ್ತಂಗಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಮುಜಾಮಿಲ್ ಮಕಾನದಾರ, ಸಾಕ್ಷಿ ಗೊಂದಿ ಇತರರಿದ್ದರು. 

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅತೀ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವುದು ನಮ್ಮ ಸಂಸ್ಥೆಯ ಹಿರಿಮೆ, ಮುಂದೆಯೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಮುಂದುವರಿಯಲಿದ್ದು ಅರ್ಹರು ಪ್ರಯೋಜನ ಪಡೆಯಬಹುದೆಂದರು.  

ಮಹಾಲಿಂಗಪುರ ಮತ್ತು ಸುತ್ತಮುತ್ತಲಿನಲ್ಲಿ ಆಂಗ್ಲಮಾಧ್ಯಮ ಶಾಲೆಗಳಿಲ್ಲದಿರುವ ಸಮಯ ಅಂದರೆ 35ವರ್ಷಗಳ ಹಿಂದಿನಿಂದಲೂ ಅತೀ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣದ ನೀಡುತ್ತಾ ಬಡ ಮಕ್ಕಳ ಬಾಳಿಗೆ ಬೆಳಕಾಗಿರುವುದು ದೊಡ್ಡ ಕ್ರಾಂತಿ. ಈ ಶಾಲೆಯಲ್ಲಿ ನನ್ನ ಮಗ 10ನೇ ತರಗತಿವರೆಗೆ ಶಿಕ್ಷಣ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದು ನನಗೆ ಹೆಮ್ಮೆ. 

ಶೀಲಾ ರಾಜೇಶ ಭಾವಿಕಟ್ಟಿ, ಪುರಸಭಾ ಉಪಾಧ್ಯಕ್ಷೆ.