ನವದೆಹಲಿ, ಅ, 9: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನಕ್ಕೆ ಮುನ್ನವೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ಗಾಂಧಿ ರಾಜೀನಾಮೆ ನೀಡಿ ಹೊರ ಹೋಗಿದ್ದು, ಪಕ್ಷಕ್ಕ ದೊಡ್ಡ ಹೊಡೆತ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ಗಾಂಧಿ ರಾಜೀನಾಮೆ ನೀಡುವ ಮೂಲಕ ಸೋಲಿನಿಂದ ಪಲಾಯನವಾದ ಮಾಡಿದ್ದಾರೆ. ಇದರಿಂದಾಗಿ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನಕ್ಕೆ ಅವಕಾಶವೂ ಸಿಗಲಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದರು.
ಬಿಜೆಪಿಯಿಂದ ಹೀನಾಯ ಸೋಲು ಕಂಡ ಬಳಿಕ ಪಕ್ಷದ ಸ್ಥಿತಿಗತಿ ಬಗ್ಗೆ ವಿವರಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಏಕೆ ಸೋಲಾಯಿತು ಎನ್ನುವುದನ್ನು ನಾವು ವಿವರವಾಗಿ ಮತ್ತು ವಸ್ತುನಿಷ್ಠವಾಗಿ, ವಾಸ್ತವವಾಗಿ ವಿಶ್ಲೇಷಣೆ ಮಾಡಲೇ ಇಲ್ಲ, ಇದಕ್ಕೆ ಮುಖ್ಯ ಕಾರಣ ಎಂದರೆ ನಾಯಕ ಹೊರ ಹೋಗಿದ್ದು ಎಂದು ಹೇಳಿದ್ದಾರೆ.
ಸೋಲಿನ ಹೊಣೆಹೊತ್ತು ರಾಹುಲ್ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಅಂತಹ ನಿರ್ಧಾರ ತೆಗೆದುಕೊಳ್ಳುವಾಗ ಹುದ್ದೆಯಲ್ಲಿ ಮುಂದುವರಿದು ಸಂಘಟನೆಗೆ ಹೊಸ ಹುಟ್ಟು ನೀಡಬೇಕು ಎಂದು ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಮಾಡಿಕೊಂಡ ಮನವಿಯನ್ನು ಅವರು ಕಡೆಗಣಿಸಿದ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದರು.
ರಾಹುಲ್ ರಾಜೀನಾಮೆಯನ್ನು ಪಲಾಯನವಾದ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಲೇವಡಿಯ ರೀತಿಯಲ್ಲಿ ಹೇಳಿರುವುದು ಇದೇ ಮೊದಲು ಎನ್ನಲಾಗಿದೆ.