ಬೆಂಗಳೂರು, ಫೆ.5 : ಬೀದರ್‌ನ ಶಾಹೀನ್ ಶಾಲೆಯಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ನಾಟಕ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಕೃತ್ಯವನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್, ಪ್ರಕರಣವನ್ನು ಹಿಂಪಡೆಯುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದ ನಿಯೋಗ ಬುಧವಾರ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿತು.
ಜನರ ಪ್ರತಿಭಟನೆಯನ್ನು ದೇಶದ್ರೋಹ ಅಥವಾ ದೇಶದ್ರೋಹವೆಂದು ಪರಿಗಣಿಸುವಂತಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕೆಲವು ಸ್ಥಳೀಯ ರಾಜಕೀಯ ಮುಖಂಡರ ಒತ್ತಡಕ್ಕೆ ಪೊಲೀಸರು ಬಲಿಯಾಗಿದ್ದಾರೆ. ಪ್ರಕರಣವನ್ನು ಹಿಂಪಡೆಯಲು ಮತ್ತು ಬಂಧಿತ ಮಹಿಳೆಯರನ್ನು ಬಿಡುಗಡೆ ಮಾಡಲು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದರು.
ಮೊದಲನೆಯದಾಗಿ, ದೇಶದ್ರೋಹದ ವಿರುದ್ಧ ಕಾನೂನಿನ ವ್ಯಾಪಕ ದುರುಪಯೋಗವಾಗಿದೆ, ಇದರಿಂದ ದುರ್ಬಲರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದೇಶದ್ರೋಹಕ್ಕೆ ಸಂಬಂಧಿಸಿದ ನಿಬಂಧನೆಯು 1860 ರ ಹಿಂದಿನದು. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ರ ಭಾಗವಾಗಿದೆ. ಅದರ ವ್ಯಾಪ್ತಿ ಮತ್ತು ಶಿಕ್ಷೆಯನ್ನು ವ್ಯಾಖ್ಯಾನಿಸಲು ಬಳಸುವ ಪದಗಳು ಬಹಳ ವಿಶಾಲ ಮತ್ತು ಆಳವಾದ ಅರ್ಥವನ್ನು ಹೊಂದಿವೆ. ಸಂವಿಧಾನವು ಖಾತರಿಪಡಿಸಿದ ಸ್ವಾತಂತ್ರ್ಯ, ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ರಾಷ್ಟ್ರದ ವಿರುದ್ಧದ ಪಿತೂರಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ದುರುದ್ದೇಶಪೂರಿತ ಪ್ರಕರಣವನ್ನು ಹಿಂಪಡೆಯುವಂತೆ ಆಗ್ರಹಿಸಲಾಯಿತು
ದಿನೇಶ್ ಗುಂಡೂರಾವ್ ಮಾತನಾಡಿ, ಶಾಹೀನ್ ಪ್ರಕರಣದ ವಿರುದ್ಧ ಸ್ಥಳೀಯವಾಗಿ ಈಶ್ವರ ಖಂಡ್ರೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪೊಲೀಸ್ ಇಲಾಖೆಯನ್ನು ತಮಗೆ ರಾಜಕೀಯವಾಗಿ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ.ಸರ್ಕಾರದ ವಿರುದ್ಧ ಮಾತಾಡನಾಡುವುದು ದೇಶದ್ರೋಹ ಹೇಗಾದೀತು ಎಂದು ಪ್ರಶ್ನಿಸಿದರು.
ತಮಗೆ ಅನೂಕೂಲವಾಗುವ ಕೇಸ್ ಗಳಿಗೆ ಸರ್ಕಾರ ಅದಷ್ಟೂ ಬೇಗ ಕ್ರಮ ಕೈಗೊಳ್ಳುತ್ತಿದೆ. ಪ್ತಧಾನಿ ಮಂತ್ರಿ ವಿರುದ್ಧ ಮಾತನಾಡುವುದು ದೇಶದ್ರೋಹ ಹೇಗಾದೀತು ? ಟೀಕೆ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳಿದರು.
ಮುಖ್ಯಮಂತ್ರಿಗಳು ಅದಷ್ಟೂ ಬೇಗ ಈ ಕಡೆ ಗಮನ ಹರಿಸಿ ಅಧಿಕಾರಿಗ ವಿರುದ್ದ ಕ್ರಮ ಕೈಗೊಳ್ಳಬೇಕು. ಪೊಲೀಸರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಬೃಹತ್ ಹೋರಾಟ ರೂಪಿಸುವುದಾಗಿ ದಿನೇಶ್ ಗುಂಡೂರಾವ್ ಎಚ್ಚರಿಸಿದರು.
ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ, ಬೀದರ್ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಕ್ಕಳ ನಾಟಕದಲ್ಲಿ ಮಕ್ಕಳು ಬಳಸಿರುವ ಭಾಷೆ ದೇಶದ್ರೋಹ ಎಂದು ಬಿಜೆಪಿ ಹೇಳುತ್ತಿದೆ. ಮುಗ್ಧ ಮಕ್ಕಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ
ಒಂದೇ ವಾರದಲ್ಲಿ ಐದು ಬಾರಿ ವಿಚಾರಣೆ ಮಾಡಲಾಗಿದೆ. ಸರ್ಕಾರದ ನಿರ್ಧಾರಗಳನ್ನು ವಿರೋಧ ಮಾಡಿದ ತಕ್ಷಣ ದೇಶ ವಿರೋಧವಾಗುವುದಿಲ್ಲ. ಎಳೆಯ ಮಕ್ಕಳ ಮೇಲೆ ದೇಶದೋಹ್ರ ಆರೋಪ ಮಾಡುವುದು ಆಕ್ಷೇಪಾರ್ಹ ಎಂದು ಕಿಡಿಕಾರಿದರು.
ಇದು ರಾಜಕಾರಣದ ಪ್ರಶ್ನೆ ಅಲ್ಲ. ಈ ರೀತಿ ಪೊಲೀಸ್ ಇಲಾಖೆಯನ್ನು ಬಳಸಿಕೊಂಡವರು ದೇಶದಲ್ಲಿ ಯಾರು ಉಳಿದಿಲ್ಲ ಎಂದು ಕುಟುಕಿದರು.