ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆಒಳ ರಸ್ತೆಗಳು ರೈತರಿಗೆ, ಪ್ರವಾಸಿಗರಿಗೆ ಅನುಕೂಲಕರ: ಶಾಸಕ ಹೆಚ್‌.ಆರ್‌.ಗವಿಯಪ್ಪ

ಕಾಮಗಾರಿಗಳಿಗೆ ಭೂಮಿ ಪೂಜೆ

ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆಒಳ ರಸ್ತೆಗಳು ರೈತರಿಗೆ, ಪ್ರವಾಸಿಗರಿಗೆ ಅನುಕೂಲಕರ: ಶಾಸಕ ಹೆಚ್‌.ಆರ್‌.ಗವಿಯಪ್ಪ

ಹೊಸಪೇಟೆ (ವಿಜಯನಗರ) 25: ವಿಜಯನಗರ ಕ್ಷೇತ್ರವು ಪ್ರವಾಸಿಗರ ಪ್ರಮುಖ ತಾಣವಾಗಿದೆ. ಒಳ ರಸ್ತೆಗಳಿಂದ ಪ್ರವಾಸಿಗರಿಗೆ ಇನ್ನಷ್ಟು ಅನುಕೂಲವಾಗಲಿದೆಯಲ್ಲದೆ ರೈತರು ತಮ್ಮ ಹೊಲಗಳಿಗೆ ನಿರಾಯಾಸವಾಗಿ ತಲುಪಲು ಒಳ ರಸ್ತೆಗಳು ಮುಖ್ಯವಾಗಲಿದೆ ಎಂದು ವಿಜಯನಗರ ಕ್ಷೇತ್ರ ಶಾಸಕರಾದ ಹೆಚ್‌.ಆರ್‌.ಗವಿಯಪ್ಪ ಅವರು ಹೇಳಿದರು.ಹೊಸಪೇಟೆ ತಾಲೂಕಿನ ಬೈಲುವದ್ದಗೇರಿ ಗ್ರಾಮ ಮತ್ತು ಇಪ್ಪಿತೇರಿಯಲ್ಲಿ ಅಕ್ಟೋಬರ್ 28 ರಂದು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಬೈಲುವದ್ದಿಗೇರಿ ಯಿಂದ ಹೊಸ ಚಿನ್ನಾಪುರಕ್ಕೆ 6.90 ಕಿಲೋಮೀಟರ್ ಹೊಸ ಎಂಡಿಆರ್ ರಸ್ತೆ ಅಭಿವೃದ್ಧಿ ಕಾಮಗಾರಿಯು ನಾನಾ ಕಾರಣಗಳಿಂದ ವಿಳಂಬವಾಗಿತ್ತು. ಈಗ ಈ ಕಾಮಗಾರಿಗೆ ಚಾಲನೆ ಸಿಕ್ಕಿರುವುದು ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ಬರುವ ಪ್ರವಾಸಿಗರಿಗೆ ಹಂಪಿ, ಕಮಲಾಪುರ ಮತ್ತು ಆಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್‌ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ತಲುಪಲು ಒಳ ರಸ್ತೆಯಿಂದ ಅನುಕೂಲವಾಗುತ್ತದೆ. ಮತ್ತು ಈ ಭಾಗದ ರೈತರಿಗೂ ಸಹ ತಮ್ಮ ಹೊಲಗಳಿಗೆ ನಿರಾಯಾಸವಾಗಿ ತಲುಪಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಈ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು ಹಾಗೂ ಒಳ್ಳೆಯ ಗುಣಮಟ್ಟದ ಕಾಮಗಾರಿಯಾಗಿರಬೇಕು ಎಂದು ಗುತ್ತಿಗೆ ವಹಿಸದ ಆತ್ರೇಯ ಕಂಸ್ಟ್ರಕ್ಷನ್ ರವರಿಗೆ ತಿಳಿಸಿದರು.ಹೊಸಪೇಟೆ ಯಿಂದ ಬಳ್ಳಾರಿಗೆ ಹೋಗುವ ಹೆದ್ದಾರಿ ಕಾಮಗಾರಿಯು ವಿಳಂಬವಾಗುತ್ತಿದ್ದು, ಕಾಮಗಾರಿ ಗುತ್ತಿಗೆ ಪಡೆದವರಿಗೆ ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಸಣ್ಣಪುಟ್ಟ ಸಮಸ್ಯೆಗಳಿಗೆ ಕಾಮಗಾರಿಯನ್ನು ವಿಳಂಬಮಾಡಬಾರದು, ಏನೇ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳ ಗಮನಕ್ಕೆ ತಂದರೆ ಅವುಗಳನ್ನು ಅಧಿಕಾರಿಗಳಿಗೆ ಹೇಳಿ ಸರಿಪಡಿಸಲಾಗುವುದು ಎಂದು ಗುತ್ತಿಗಾರರಿಗೆ ತಿಳಿಸಿಲಾಗಿದೆ ಎಂದು ಹೇಳಿದರು. 

ಬೈಲುವದ್ದಿಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶಾಂತಮ್ಮ ಅವರು ಮಾತನಾಡಿ, ಗ್ರಾಮದಲ್ಲಿ ಬಸ್ ನಿಲ್ದಾಣ, ಬಡವರಿಗೆ ಮನೆಗಳು ಹಾಗೂ ಸುಡಗಾಡಪ್ಪ ದೇವಸ್ಥಾನಕ್ಕೆ ಬಹಳ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕಾಗಿದೆ ಎಂದು ಮನವಿ ಮಾಡಿದರು.  

ಇದಕ್ಕೆ ಶಾಸಕರು ಬಸ್ ನಿಲ್ದಾಣಕ್ಕೆ 5 ಲಕ್ಷ ನೀಡಲಾಗುವುದು ಮತ್ತು ಮನೆಗಳಿಗೆ, ಶೌಚಾಲಯ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.ಕಾಮಗಾರಿ ವಿವರ: 20.24 ಕೋಟಿ ಅನುದಾನದಲ್ಲಿ ಬೈಲುವದ್ದಿಗೇರಿ ಯಿಂದ ಹೊಸ ಚಿನ್ನಾಪುರಕ್ಕೆ 6.90 ಕಿಲೋಮೀಟರ್ ಹೊಸ ಎಂಡಿಆರ್ ರಸ್ತೆ ಅಭಿವೃದ್ಧಿ ಹಾಗೂ ಹೊಸಪೇಟೆಯ ಚಿತ್ತವಾಡಿಗಿ ಯಿಂದ ಇಪ್ಪಿತೇರಿವರೆಗೆ 4 ಕಿಲೋಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು 7.40 ಕೋಟಿ ವೆಚ್ಚದಲ್ಲಿ ಬೆಲ್ಲ ಕಾಂಕ್ರೀಟ್ ಕಾಲುವೆ ಆಧುನಿಕರಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೆರಿಸಿದರು. 

ಕಾರ್ಯಕ್ರಮದಲ್ಲಿ ಹೊಸಪೇಟೆ ತಹಶಿಲ್ದಾರರಾದ ಶೃತಿ ಎಂ.ಎಂ, ಇಪ್ಪಿತೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಕಿಚಡಿ ಜಯಪದ್ಮ, ಬೈಲುವದ್ದಗೇರಿ ಗ್ರಾಮ ಪಂಚಾಯತಿ ಪಿಡಿಓ ಹನುಮಂತಪ್ಪ, ಶಾಂತ ಕಂಸ್ಟ್ರಕ್ಷನ್‌ನ ಅಜೀತ್ ಶೆಟ್ಟಿ ಹಾಗೂ ವಿವಿಧ ಅಧಿಕಾರಿ ಮತ್ತು ಗ್ರಾಮದ  ಮುಖಂಡರು ಉಪಸ್ಥಿತರಿದ್ದರು.