ಮೂಲಭೂತ ಹಕ್ಕುಗಳ ಹರಿಕಾರ ಭೀಮಸಾಹೇಬ : ಆನೆಗುಂದಿ

Bhimasaheba, pioneer of fundamental rights: Anegundi

ಧಾರವಾಡ 08 : ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಆಧುನಿಕ ಭಾರತದ ದೇವಮಾನವ. ಒಂದು ವೇಳೆ ಇಂಥ ಮಹಾನ ವ್ಯಕ್ತಿಗಳು ಭಾರತದಲ್ಲಿ ಹುಟ್ಟದೇ ಹೋಗಿದ್ದರೇ ನಮ್ಮ ಸಮುದಾಯ ಯಾವ ಪರಿಸ್ಥಿತಿಯಲ್ಲಿರುತ್ತಿತ್ತೋ ಗೊತ್ತಿಲ್ಲ. ಆ ಪರಮಾತ್ಮನ ಕೃಪೆ ಕಾರಣ ಬಾಬಾಸಾಹೇಬರು ಈ ದೇಶದಲ್ಲಿ ಹುಟ್ಟಿ ಮಾನವೀಯ ಮೌಲ್ಯಗಳನ್ನು, ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದು ನಮಗೂ ಇತರೇ ಸಮಾಜದ ಜೊತೆ ಸರಿಸಮಾನವಾಗಿ  ಬಾಳಲು ಅವಕಾಶ ಮಾಡಿಕೊಟ್ಟ ಕಾರಣ ಅವರು ಆಧುನಿಕ ಭಾರತದ ದೇವಮಾನವರು ಎಂದು ಕರ್ನಾಟಕ ಭೀಮ್ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಮತ್ತು ಸ್ಫೂರ್ತಿಧಾಮ ಆಶ್ರಮದ ಹಾಗೂ ಸರ್ವೋದಯ ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಸರ್ಜಾಪೂರ ಹೇಳಿದರು. 

ನಗರದಲ್ಲಿ ಆಯೋಜಿಸಿದ್ದ ಬಾಬಾಸಾಹೇಬರ 68ನೇ ಮಹಾ ಪರಿನಿರ್ವಾಣ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಂಬೇಡ್ಕರರವರ ಪುತ್ಥಳಿಗೆ ಮಾಲಾರೆ​‍್ಣ ಮಾಡಿ, ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಜಾಪೂರ ಮಾತನಾಡಿದರು. ನಮಗೆ ಹಸಿದಾಗ ಯಾರು ಅನ್ನ ಕೊಡಿಸುತ್ತಾರೋ, ಗೌರವ ಕೊಡಿಸುತ್ತಾರೋ ಅವರೇ ನಿಜವಾದ ದೇವಮಾನವರು ಎಂದರು. ಭಾರತದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ, ಮಾನವೀಯ ಮೌಲ್ಯಗಳಿಗಾಗಿ ಹೋರಾಡಿದವರು ಡಾ. ಬಾಬಾಸಾಹೇಬ ಅಂಬೇಡ್ಕರ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ ಸರ್ಜಾಪೂರ ತಿಳಿಸಿದರು. 

ಹಿರಿಯ ಪತ್ರಕರ್ತರು, ಸಮಾಜವಾದಿಗಳಾದ ಬಸವರಾಜ ಆನೆಗುಂದಿ ಮಾತನಾಡಿ ಜಗತ್ತಿನಲ್ಲಿಯೇ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದು, ಪ್ರಪಂಚಕ್ಕೆ ಅತ್ಯಂತ ಶ್ರೇಷ್ಠ ಲಿಖಿತ ಸಂವಿಧಾನ ಕೊಟ್ಟವರು ಭೀಮಸಾಹೇಬರು ಎಂದರು. ತಮ್ಮ ಜೀವನಪೂರ್ತಿ ಸಮಾಜಕ್ಕಾಗಿ, ಸಮಾಜ ಪರಿವರ್ತನೆಗಾಗಿ, ಸಮ ಸಮಾಜಕ್ಕಾಗಿ ಹೋರಾಡಿದ ಮಹಾನ್ ಮಾನವತಾವಾದಿ ಎಂದು ಆನೆಗುಂದಿ ತಿಳಿಸಿದರು. ಬಹುವೇಷಾಧಾರಿ ಮುಖವಾಡಿಗರು ಸಂವಿಧಾನವನ್ನು ವಿರೋಧಿಸುತ್ತಾರೆ. ಸಂವಿಧಾನದ ಒಳಾರ್ಥ, ಗೂಡಾರ್ಥ ಇವೆಲ್ಲವುಗಳು ಮಾನವೀಯ ಮೌಲ್ಯಗಳನ್ನೇ ಪ್ರತಿಪಾದಿಸುತ್ತದೆ. ಮರವೇಕೆ ತನ್ನ ಟೊಂಗೆಗಳನ್ನು ದ್ವೇಷಿಸಬೇಕು? ಹೃದಯವೇಕೆ ತನ್ನ ಬಾಹ್ಯ ಅಂಗಾಂಗಗಳನ್ನು ದ್ವೇಷಿಸುತ್ತಾ ಬರಬೇಕು? ಇದಕ್ಕೆಲ್ಲ ಉತ್ತರವನ್ನು ಸಂವಿಧಾನದ ಮೂಲಕ ಭಾರತರತ್ನ ಭೀಮಸಾಹೇಬರು ಕೊಟ್ಟಿದ್ದಾರೆಂದು ಪತ್ರಕರ್ತ ಬಸವರಾಜ ಆನೆಗುಂದಿ ಹೇಳಿದರು. 

ಈ ದಿವ್ಯ ಭವ್ಯ ಸಮಾರಂಭದಲ್ಲಿ ಕರ್ನಾಟಕ ಭೀಮ್ ಸೇನೆ ಸಮಿತಿಯ ಧಾರವಾಡ ಜಿಲ್ಲೆಯ ಸದಸ್ಯರು, ಮಹಿಳಾ ಪದಾಧಿಕಾರಿಗಳು ಸೇರಿದಂತೆ ದಲಿತರ ಹಕ್ಕುಗಳ ಹೋರಾಟ ಸಮಿತಿ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ ಲೋಕಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ಅದವಾನಿ, ಪದಾಧಿಕಾರಿಗಳಾದ ಸೂರಜ ನೀಲಣ್ಣವರ, ಶುಭಂ ಕುಂಟಿ, ಸುದೀಪ ಛಲವಾದಿ, ಅನೂಪ ನೀಲಣ್ಣವರ, ಗೌತಮ ಮೂಶಣ್ಣವರ, ತೇಜಸ್ ಕೋಲಕಾರ, ಪವನ ಮೂಶಣ್ಣವರ ಮತ್ತು ಸಾಮಾಜಿ ಹೋರಾಟಗಾರ ಮುತ್ತು ಬೆಳ್ಳಕ್ಕಿ ಹಾಜರಿದ್ದರು. ನೂರಾರು ವಿದ್ಯಾರ್ಥಿಗಳು, ನಾಗರಿಕರು ಅನ್ನ ಸಂತರೆ​‍್ಣ ಸವಿದರು.