ಸಾಹಿತಿಗಳ ಹೆಸರಿನಲ್ಲಿ ಭವನ ನಿರ್ಮಾಣ ನಮ್ಮ ಹೆಮ್ಮೆ: ಮನುಬಳಿಗಾರ

ಬೆಳ್ ಗಾವಿ , ಡಿ 25 ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಾಡಿನ ಪ್ರಮುಖ ಸಾಹಿತಿಗಳ ಹೆಸರಿನಲ್ಲಿ ಸಾಹಿತ್ಯ ಭವನಗಳನ್ನು ನಿರ್ಮಾಣ ಮಾಡುತ್ತಿರುವುದು ನಮ್ಮ ಹೆಮ್ಮೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನುಬಳಿಗಾರ್ ಹೇಳಿದ್ದಾರೆ. ತಾಲೂಕಿನ ಘೋಡಗೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ಹೆಸರಿನಲ್ಲಿ ನಿರ್ಮಾಣಗೊಂಡ ಕನ್ನಡ ಸಾಹಿತ್ಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಚಂದ್ರಶೇಖರ ಕಂಬಾರ ಅವರ ಜೀವಿತಾವಧಿಯಲ್ಲಿ ಅವರ ಹೆಸರಿನ ಸಾಹಿತ್ಯ ಭವನ ನಿರ್ಮಾಣಗೊಂಡು ಅವರ ಸಮಕ್ಷಮವೇ ಲೋಕಾರ್ಪಣೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು. ರಾಜ್ಯದ ವಿವಿಧ ಸ್ಥಳಗಳಲ್ಲಿ ೨೨ ಕ.ಸಾ.ಪ. ಭವನಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿವೆ. ಸಾಹಿತ್ಯ ಪರಿಷತ್ತಿನ ೧೦೫ ವರ್ಷಗಳ ಇತಿಹಾಸದಲ್ಲಿ ಸಾಹಿತಿಗಳ ಹೆಸರಿನಲ್ಲಿ ಭವನ ನಿರ್ಮಿಸುತ್ತಿರುವುದು ವಿಶೇಷ ಹಾಗೂ ವಿನೂತನ ಪ್ರಯತ್ನ. ಸಾರ್ವಜನಿಕರು ಈ ಭವನದಲ್ಲಿ ಗ್ರಂಥಾಲಯ ನಿರ್ಮಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.  ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಘೋಡಗೇರಿ ಸಾಹಿತ್ಯ ಭವನ ಯಾತ್ರಾ ಸ್ಥಳವಾಗಿ ನಿರ್ಮಾಣವಾಗಬೇಕು. ಇನ್ನುಳಿದ ಗ್ರಾಮಗಳ ಕನ್ನಡ ಭವನದ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನೀಡುವ ಮೂಲಕ ಸಾಹಿತ್ಯ ಪರಿಷತ್ತು ತಮ್ಮ ವಾಗ್ದಾನ ಉಳಿಸಿಕೊಳ್ಳಬೇಕು ಎಂದರು. ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್, ಡಾ ಚಂದ್ರಶೇಖರ ಕಂಬಾರ ಅವರು ನಮ್ಮ ನಾಡಿನ ಹೆಮ್ಮೆಯ ಸಾಹಿತ್ಯದ ಕಳಶವಿದ್ದಂತೆ. ಕನ್ನಡ ನಾಡು ನುಡಿ ಬೆಳೆಸುವಲ್ಲಿ ಅಪಾರ ಶಕ್ತಿ ವ್ಯಯಿಸಿದ್ದಾರೆ  ಎಂದು ಶ್ಲಾಘಿಸಿದರು.  ಕಸಾಪ ತಾಲೂಕಾ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು, ಹಿರಿಯರಾದ ಶ್ರೀಶೈಲಪ್ಪಣ್ಣ ಮಗದುಮ್ಮ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಲ್.ವಿ ಪಾಟೀಲ, ಗ್ರಾಮ ಪಂ ಅಧ್ಯಕ್ಷೆ ಶಾರದಾ ಪೂಜೇರಿ, ಉಪಾಧ್ಯಕ್ಷೆ ಬಾಯವ್ವಾ ಸನದಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಅ.ಮ.ಮುಂಡಾಸಿ, ಬಾಬು ನಾಯಿಕ, ಎಸ್.ಎಮ್.ಶಿರೂರ, ಶಿವಾನಂದ ಗುಂಡಾಳಿ, ರಾಜಶೇಖರ ಇಚ್ಚಂಗಿ, ಅರಿಹಂತ ಬಿರಾದಾರ ಪಾಟೀಲ ಮತ್ತು ಕಸಾಪ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರು ಉಪಸ್ಥಿತರಿದ್ದರು.ಡಾ.ಚಂದ್ರಶೇಖರ ಕಂಬಾರ ಅವರೊಂದಿಗೆ ಸಂವಾದ ಗೋಷ್ಠಿಗಳು ಮತ್ತು ಕವಿಗೋಷ್ಠಿಗಳು ನಡೆದವು.