ಭಾರತ್ ಬಂದ್ ಹಿನ್ನೆಲೆ: ಸಿಲಿಕಾನ್ ಸಿಟಿಯಲ್ಲಿ ಬಿಗಿ ಭದ್ರತೆ

ಬೆಂಗಳೂರು, ಜ. 8 ವಿವಿಧ ಕಾರ್ಮಿಕ ಸಂಘಟನೆಗಳಿಂದ ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಭದ್ರತೆಗಾಗಿ 11 ಡಿಸಿಪಿ, 23 ಎಸಿಪಿ,111 ಇನ್ಸ್ಪೆಕ್ಟರ್ಗಳು, 316 ಪಿಎಸ್ಐ, 476 ಎಎಸ್ಐಗಳು, 4,547 ಕಾನ್ಸ್ಟೇಬಲ್ಗಳು, 82 ಕೆಎಸ್ಆರ್ಪಿ ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.ಕೇವಲ ನಗರದ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದ್ದು, ಪ್ರತಿಭಟನನಿರತರಿಂದ ಸಾರ್ವಜನಿಕರಿಗೆ ತೊಂದರೆ ಆದಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್, ಸಿಬ್ಬಂದಿಗೆ ಸೂಚಿಸಿದ್ದಾರೆ. ಈಗಾಗಲೇ ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿ ಕಮಲ್ ಪಂತ್, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯಲ್ಲಿ ಭೇಟಿಯಾಗಿದ್ದಾರೆ. ಸೂಕ್ತಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದು, ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಿ. ಬಂದ್ ಗೆ ಬಲವಂತ ಪಡಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳು ಖಡಕ್ ಸೂಚನೆ ನೀಡಿದ್ದಾರೆ. ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಬಾರದು. ಅಲ್ಲದೇ, ಜನಜೀವನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ನಗರದ ಟೌನ್ ಹಾಲ್ ಬಳಿ ಪ್ರತಿಭಟನೆಗೆ ಅವಕಾಶವಿರದ ಹಿನ್ನೆಲೆಯಲ್ಲಿ ಡಿಸಿಪಿ ಚೇತನ್ ಸಿಂಗ್ ರಾಥೋಡ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಯುವುದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ಹೊರವಲಯದಿಂದ ಮೆರವಣಿಗೆ ಮೂಲಕ ಫ್ರೀಡಂಪಾರ್ಕ್ಗೆ ಮೆರವಣಿಗೆ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ. ಪೊಲೀಸರು ಅನುಮತಿ ನಿರಾಕರಿಸಿದ್ದರೂ ನಾವು ಜಾಥಾ ನಡೆಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಟೌನ್ ಹಾಲ್ ಬಳಿ 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆಗೊಳಿಸಲಾಗಿದೆ.