ವಿಜಯಪುರ 15: ನೈತಿಕತೆ, ಮೌಲ್ಯಗಳು ಮತ್ತು ಮಾನವೀಯತೆಯಂತಹ ಗುಣಗಳು ಮರೆಯಾಗುತ್ತಿರುವ ಇಂದಿನ ಯುವಕರು ಮತ್ತು ಮಕ್ಕಳಲ್ಲಿ ಭಗವದ್ಗೀತೆಯಲ್ಲಿ ತಿಳಿಸಿದ ಸಂದೇಶದ ಸಾರವನ್ನು ಅರ್ಥೈಸಬೇಕು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಸಾರಿದ ತತ್ವಗಳ ಸಾರ-ಸಂದೇಶ ಮತ್ತು ನೈತಿಕ, ಜೀವನ ಮೌಲ್ಯ ಮತ್ತು ಸತ್ಯ, ನ್ಯಾಯ, ನೀತಿ, ನಿಷ್ಠುರತೆ, ಪ್ರಾಮಾಣಿಕತೆ, ಭ್ರಾತೃತ್ವ, ಕೌಟುಂಬಿಕ ಪ್ರೀತಿ, ಮಮತೆ, ಅನ್ಯೋನ್ಯತೆ, ಜ್ಞಾನ, ಕರ್ತವ್ಯ ಪ್ರಜ್ಞೆ ಮತ್ತು ವೈರಾಗ್ಯದಂತಹ ಗುಣಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀರಾಮ ದೇಶಪಾಂಡೆ ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಗೀತಾ ಜಯಂತಿಯ ಪ್ರಯುಕ್ತ ಭಗವದ್ಗೀತೆಯ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ನಮ್ಮ ಭಾರತೀಯರ ಬದುಕಿಗೆ ಭದ್ರ ಬುನಾದಿಯಾದದ್ದು ಸನಾತನ ಸಂಸ್ಕೃತಿ. ನಮಗೆ ಪಂಚಮ ವೇದವೆನಿಸಿದ ಮರಣವಿಲ್ಲದ ಅಮರ ಕಾವ್ಯವೇ ಮಹಾಭಾರತ. ಕುರುಕ್ಷೇತ್ರದ ಸಂಗ್ರಾಮದಲ್ಲಿ ಶ್ರೀ ಕೃಷ್ಣನು ಇಡೀ ಮಾನವ ಕುಲದ ಉದ್ಧಾರಕ್ಕಾಗಿ ಅರ್ಜುನನ ನೆಪದಿಂದ ತತ್ವೋಪದೇಶ ಮಾಡಿದ್ದಾನೆ. ಆದ್ದರಿಂದ ಭಗವದ್ಗೀತೆಯಲ್ಲಿ ಶ್ಲೋಕಗಳ ಮೂಲಕ ಸಾರಿದ ತತ್ವೋಪದೇಶಗಳ ಸಮಗ್ರ ಸಂದೇಶಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಟ್ಟು ಅವರು ಸನ್ಮಾರ್ಗದತ್ತ ಸಾಗುವಂತೆ ಪ್ರೇರೇಪಿಸುವದು ಇಂದಿನ ಅಗತ್ಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಪ್ರೊ. ಎಂ.ಎಸ್.ಖೊದ್ನಾಪೂರ, ಬಿ.ಆರ್. ಬಿರಾದಾರ, ನಿಂಗನಗೌಡರ, ಪ್ರೊ. ಎಂ.ಆರ್. ಜೋಶಿ, ವೆಂಕಟೇಶ ಹೊಸಮನಿ, ಶಿವಾನಂದ ಬಿಜ್ಜರಗಿ, ಎಸ್.ಬಿ.ಪೂಜಾರಿ, ಎಸ್.ಎಸ್.ಪತ್ತಾರ, ಬಾಬು ಕೋಲಕಾರ, ಡಾ. ಅನಂದ ದೈಯಗೊಂಡ, ಪ್ರೊ. ಬಿ.ಆರ್.ಕುಮಟಗಿ ಇನ್ನಿತರು ಉಪಸ್ಥಿತರಿದ್ದರು.
ಈ ಭಗವದ್ಗೀತೆಯ ಅಭಿಯಾನ ಮತ್ತು ಹನುಮಾನ ಚಾಲೀಸ ಪಠಣದಲ್ಲಿ ಸುತ್ತಮುತ್ತಲಿನ ನೂರಾರು ಮಹಿಳೆಯರು, ಯುವಕರು ಹಾಗೂ ಮಕ್ಕಳು ಭಾಗವಹಿಸಿದ್ದರು.