ಬೆಂಗಳೂರು, ಮಾ.23 ,ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಅವರ ಹುತಾತ್ಮ ದಿನದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ನಮನ ಸಲ್ಲಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, ಭಗತ್ ಸಿಂಗ್ ಅವರು, ಸುಖ್ ದೇವ್, ರಾಜ್ ಗುರು ಅವರೊಟ್ಟಿಗೆ ದೇಶದ ದಾಸ್ಯ ಮುಕ್ತಿಗಾಗಿ ನೇಣಿಗೆ ಕೊರಳೊಡ್ಡಿ ಹುತಾತ್ಮರಾದ ದಿನವಿದು. ಸ್ವಾತಂತ್ರ್ಯದೆಡೆಗಿನ ಅವರ ತುಡಿತ, ದೇಶಪ್ರೇಮ, ತ್ಯಾಗಗಳಿಗೆ ಕೋಟಿ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.ಉಪ ಮುಖ್ಯಮಂತ್ರಿ ಗೋವಿಂದ ಕಾರಜೊಳ ಟ್ವೀಟ್ ಮಾಡಿ, ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ಕಿರಿಯ ವಯಸ್ಸಿನಲ್ಲೇ ಪ್ರಾಣಾರ್ಪಣೆ ಮಾಡಿದ ಈ ಮಹಾನ್ ದೇಶಭಕ್ತರನ್ನು ನಾವೆಲ್ಲರೂ ಸ್ಮರಿಸೋಣ ಎಂದು ತಿಳಿಸಿದ್ದಾರೆ.ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, ಸ್ವಾತಂತ್ರ್ಯ ಹೋರಾಟಗಾರರು, ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಈ ದಿನ ಹುತಾತ್ಮರ ದಿನವಾಗಿ ಆಚರಣೆ ಮಾಡಲಾಗುತ್ತದೆ. ಅವರ ತ್ಯಾಗ ಬಲಿದಾನವನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ ಎಂದು ತಿಳಿಸಿದೆ.