ಬೆಂಗಳೂರು, ಜ 9 ಎಟಿಪಿ ಚಾಲೆಂಜರ್ ಟೂರ್‌ನ ಪ್ರಮುಖ ಟೂರ್ನಿಗಳಲ್ಲಿ ಒಂದಾದ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯು ಫೆಬ್ರವರಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರು ಹಚ್ಚ ಹಸಿರಿನಿಂದ ಕೂಡಿರುವ ಕಬ್ಬನ್ ಉದ್ಯಾವನದ ಅಂಗಳದಲ್ಲಿ ನಡೆಯಲಿದೆ. ಟೆನಿಸ್ ಕ್ರೀಡೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಬಾಲ್ ಬಾಯ್ ಆಗುವ ಅವಕಾಶ ಕಲ್ಪಿಸಲಾಗಿದೆ.
ವಿಶ್ವ ಶ್ರೇಷ್ಠ ಆಟಗಾರರಾದ ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಅವರು ಕೂಡ ಚಿಕ್ಕವಯಸ್ಸಿನಲ್ಲಿ ಟೆನಿಸ್ ಬಾಲ್ ಬಾಯ್ ಆಗಿ ಕಾರ್ಯನಿರ್ವಹಿಸಿದ್ದರು. ಟೆನಿಸ್ ಆಟದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಹಾಗೂ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕ್ಕೊಳ್ಳುವ ಆಸೆ ಇರುವ ಮಕ್ಕಳಿಗೆ ಇದೊಂದು ಸುವರ್ಣ ಅವಕಾಶ.
12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಈ ಅವಕಾಶ ಕಲ್ಪಿಸಿದ್ದು, ಆಸಕ್ತ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಬೆಂಗಳೂರು ಓಪನ್ 2020 ಸಂಘಟನಾ ಸಮಿತಿಯು ಈ ಮಕ್ಕಳನ್ನು ಆಯ್ಕೆ ಮಾಡಲಿದೆ.
ಫೆಬ್ರವರಿಯಲ್ಲಿ ನಡೆಯಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಪಂದ್ಯದ ವೇಳೆ ಟೆನಿಸ್ ಬಾಲ್ ನೀಡುವ ಅವಕಾಶ ಪಡೆಯಲು ಮೊದಲು ಆಯ್ಕೆ ನಡೆಯಲಿದೆ. ಭಾನುವಾರದ ಸಮಯದಲ್ಲಿ ಕೆಎಸ್‌ಎಲ್‌ಟಿಎ ಅಂಪೈರ್‌ಗಳ ಮುಖ್ಯಸ್ಥ ಸಂತೋಷ್ ವೆಂಕಟರಮಣ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂತೋಷ್ ವೆಂಕಟರಮಣ (9844442266) ಅವರನ್ನು ಸಂಪರ್ಕಿಸಬೇಕಾಗಿದೆ.
ವಿಶ್ವ ಎಟಿಪಿ ಶ್ರೇಯಾಂಕದಲ್ಲಿ 100 ರೊಳಗೆ ಸ್ಥಾನ ಪಡೆದ ಕೆಲವು ಉನ್ನತ ಆಟಗಾರರು ಬೆಂಗಳೂರು ಓಪನ್ ಟೂರ್ನಿಯಲ್ಲಿ ಆಡಲಿದ್ದಾರೆ. 2017 ರಲ್ಲಿ ಸುಮಿತ್ ನಾಗಲ್ ಮತ್ತು 2018 ರಲ್ಲಿ ಪ್ರಜ್ನೇಶ್ ಗುಣೇಶ್ವರನ್ ಅವರು ಟ್ರೋಫಿ ಪಡೆದಿದ್ದರು.