ಬೆಂಗಳೂರು. ಮಾ.25: ಲೋಕಸಭಾ ಚುನಾವಣೆಗೆ ಬಾಕಿ ಇರುವ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಸಂಜೆ ಬಿಡುಗಡೆಯಾಗಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಡಾಲರ್ಸ್ ಕಾಲೋನಿಯ ಅವರ ನಿವಾಸದಲ್ಲಿ ತಮಗೆ ಕೃತಜ್ಞತೆ ಸಲ್ಲಿಸಲು ಆಗಮಿಸಿದ್ದ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯ ಟಿಕೆಟ್ ಬಗ್ಗೆಯೂ ಇಂದು ಸಂಜೆಯೊಳಗೆ ಇತ್ಯರ್ಥವಾಗಲಿದೆ. ಕೊಪ್ಪಳದಿಂದ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಬಹುತೇಕ ನಿಶ್ಚಿತ ಎಂದು ಹೇಳಿದರು.
ದರ್ಶನ್ ಹಾಗೂ ಯಶ್ ಅವರನ್ನು ಕಳ್ಳೆತ್ತುಗಳು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಛೇಡಿಸಿದ್ದಾರೆ. ಅಪ್ಪ-ಮಕ್ಕಳಿಗೆ ಅತಂತ್ರ ಪರಿಸ್ಥಿತಿ ಉಂಟಾಗಿರುವುದರಿಂದಲೇ ಕುಮಾರಸ್ವಾಮಿ ಈ ರೀತಿ ಹತಾಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಮಾತುಗಳು ಅವರಿಗೆ ಬೇಕಾಗಿರಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಬಿಜೆಪಿಯಿಂದ ಬೇಷರತ್ ಬೆಂಬಲ-ಸುಮಲತಾ ಅಂಬರೀಶ್
ತಮಗೆ ಬಿಜೆಪಿ ಬೇಷರತ್ ಬೆಂಬಲ ನೀಡಿದೆ. ಅಂಬರೀಶ್ ಅವರ ಮೇಲಿನ ಗೌರವದಿಂದ ತಮಗೆ ಬೆಂಬಲ ನೀಡಿರುವುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ಏನು ಮಾಡಬೇಕೆಂಬುದನ್ನು ಮಂಡ್ಯದ ಜನರನ್ನೇ ಕೇಳಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಮಂಡ್ಯದ ಜನರ ಅಪೇಕ್ಷೆಯಂತೆ ಚುನಾವಣೆಗೆ ನಿಂತಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ತಮಗೆ ಬೆಂಬಲ ನೀಡಿರುವುದಕ್ಕೆ ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸಲು ಬಂದಿದ್ದು, ಈ ವೇಳೆ, ಯಡಿಯೂರಪ್ಪ ಅವರು ಮಂಡ್ಯಕ್ಕೆ ಪ್ರಚಾರಕ್ಕೆ ಬರುವ ಕುರಿತಂತೆ ಯಾವುದೇ ಚರ್ಚೆ ಮಾಡಿಲ್ಲ ಎಂದು
ಅವರು ಹೇಳಿದ್ದಾರೆ.
ಈ ವೇಳೆ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ಸುಮಲತಾ ಅವರ ಧೈರ್ಯ ಮೆಚ್ಚುವಂತಹದ್ದು. ಅವರು ಗಂಡು ಮಗಳು. ಅಂಬರೀಶ್ ಅವರ ಮೇಲೆ ಅಭಿಮಾನವಿದ್ದರೆ ಎಲ್ಲ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಬೇಕು. ಹತಾಶೆಯಿಂದ ಸಿನಿಮಾ ನಟರ ಬಗ್ಗೆ ಮಾತನಾಡುವುದು ಕುಮಾರಸ್ವಾಮಿ ಅವರಿಗೆ ಶೋಭೆ ತರುವಂತಹುದ್ದಲ್ಲ ಎಂದು ಹೇಳಿದರು.
ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್‍ಗೆ ಏಕೆ ಹೋದರು ಎಂಬುದು ಗೊತ್ತಿಲ್ಲ. ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಕುರಿತು ಜಯಪ್ರಕಾಶ್ ಹೆಗಡೆಯವರೊಂದಿಗೆ ಯಡಿಯೂರಪ್ಪ ಮಾತನಾಡುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಇಂದು ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಬೇಕಿರುವ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅಲ್ಲದೆ, ಸಂಸದ ಕರಡಿ ಸಂಗಣ್ಣ ಅವರೂ ಸಹ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದರು.
ಬಿಜೆಪಿಗೆ ಸೇರ್ಪಡೆ: ಬೆಳಗಾವಿ ಜಿಲ್ಲೆ ಬೈಲಹೊಂಗಲ ಮಾಜಿ ಶಾಸಕ ಜಗದೀಶ್ ಮೆಟಗುಡ್ ಅವರು ಇದೇ ವೇಳೆ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.