ಬೆಂಗಳೂರು: ಯಾವುದೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಸುಮಲತಾಗಿಲ್ಲ ಬಿಜೆಪಿ ಬೆಂಬಲ : ಕೆ.ಎಸ್.ಈಶ್ವರಪ್ಪ

ಬೆಂಗಳೂರು,ಮಾ 20:  ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಯಾವುದೇ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಮಂಡ್ಯದಲ್ಲೂ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಮಲ್ಲೇಶ್ವರಂನಲ್ಲಿರುವ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ರಾಜ್ಯದ ಎಲ್ಲಾ 28 ಕ್ಷೇತ್ರಗಳ ಕುರಿತು ತಡರಾತ್ರಿವರೆಗೂ ದೆಹಲಿಯಲ್ಲಿ ವರಿಷ್ಠರ ಸಮ್ಮುಖದಲ್ಲಿ ಚರ್ಚೆ ನಡೆಯಿತು.ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಯಾವುದೆ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ. ಮಂಡ್ಯದಲ್ಲಿ ಕೂಡ ನಮ್ಮ ಅಭ್ಯರ್ಥಿ ಕಣಕ್ಕಿಳಿಸಲಿದ್ದೇವೆ. ಅಲ್ಲಿ ನಮ್ಮ ಅಭ್ಯರ್ಥಿ ಇದ್ದ ಮೇಲೆ ಬೇರೆಯವರನ್ನು ಬಂಬಲಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಸುಮಲತಾ ಅಂಬರೀಶ್ ಗೆ ಬಿಜೆಪಿ ಬೆಂಬಲ ಇಲ್ಲ ಎಂದು ಅವರು ತಿಳಿಸಿದರು.

ಲೋಕಸಭೆ ಚುನಾವಣೆ ಬಿಜೆಪಿ ಕಾರ್ಯಕರ್ತರಿಗೆ ಹಬ್ಬವಾಗಿದೆ.ದೇಶದ ಜನರು ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಉತ್ಸಾಹದಲ್ಲಿದ್ದಾರೆ. ಮೂರು ಅಂಶಗಳನ್ನು ಇಟ್ಟುಕೊಂಡು ಕರ್ನಾಟಕದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದರು.

ಬಿಜೆಪಿಯ ರಾಷ್ಟ್ರೀಯ ವಿಚಾರಧಾರೆ, ದೇವದುರ್ಲಭವಾದ ಕಾರ್ಯಕರ್ತರ ಪಡೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅಲೆ.ಇದನ್ನು ನೋಡಿಯೇ ಕಾಂಗ್ರೆಸ್, ಜೆಡಿಎಸ್ ನಲ್ಲಿ ನಡುಕ ಹುಟ್ಟಿದೆ ಎಂದು ಈಶ್ವರಪ್ಪ ವಿಶ್ಲೇಷಿಸಿದರು.

ಬಿಜೆಪಿಯನ್ನು ಎರಡಂಕಿ ದಾಟಲು ಬಿಡಲ್ಲ ಎನ್ನುವ ದೇವೇಗೌಡರು ತಮಗೆ ಇರುವ ಎರಡು ಸೀಟುಗಳನ್ಮು ಮೊದಲು ಉಳಿಸಿಕೊಳ್ಳಲಿ ಎಂದು ಈಶ್ವರಪ್ಪ ಜೆಡಿಎಸ್ ನಾಯಕರಿಗೆ ಸವಾಲು ಹಾಕಿದರು. ಕಳೆದ ಚುನಾವಣೆ ಸಂದರ್ಭದಲ್ಲಿ ಇದೇ ರೀತಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದರು ಆ ಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು. ಈಗ ಜೆಡಿಎಸ್ ಹಾಗೂ ಕಾಂಗ್ರೆಸ್ ಇಬ್ಬರೂ ಸೇರಿ ಎರಡಂಕಿ ಮುಟ್ಟಲಿ ನೋಡೋಣ ಎಂದು ಸವಾಲು ಹಾಕಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಒಳಗೊಳಗೆ ಕುದಿಯುತ್ತಿದ್ದಾರೆ.ಪರಸ್ಪರ ಚಾಕು ಹಾಕಿಕೊಳ್ಳಲು ಕಾಯುತ್ತಿದ್ದಾರೆ ಎಂದು ಮೈತ್ರಿ ಬಗ್ಗೆ ಈಶ್ವರಪ್ಪ ವ್ಯಂಗ್ಯವಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯಗೆ ಗೌರವವಿಲ್ಲ.ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಮೋದಿ ಮೋದಿ ಎಂದು ಕೂಗಿದವರು ಯಾರೂ ಬಿಜೆಪಿ ಕಾರ್ಯಕರ್ತರಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದವರು, ಗುಪ್ತಚರ ಇಲಾಖೆ ಅವರ ಕೈಯಲ್ಲಿತ್ತು. ಅಷ್ಟೂ ಗೊತ್ತಾಗಬಾರದ ಅವರಿಗೆ? ‌ಈಗ ಗೊತ್ತಾಗುತ್ತಿದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲೂ ಅಯೋಗ್ಯ ಎಂದು ಸಾಬೀತಾಗುತ್ತಿದೆ ಎಂದು ಲೇವಡಿ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ರಾಹುಲ್ ಗಾಂಧಿಯವರು ಒಟ್ಟಾಗಿರುವುದು ಕುರುಡನ ಮೇಲೆ ಕುಂಟ ಕೂತಂತೆ ಆಗಿದೆ. ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿದ್ದಾರೆ‌. ಈಗ ಕರ್ನಾಟಕದಲ್ಲಿ ರಾಹುಲ್ ಗಾಂಧಿಯಲ್ಲ ಸ್ವರ್ಗದಲ್ಲಿರುವ ಇಂದಿರಾಗಾಂಧಿಯವರು ಬಂದು ನಿಂತರೂ ಗೆಲ್ಲೋದು ಬಿಜೆಪಿಯೇ ,ಪ್ರಧಾನಿಯಾಗೋದು ನರೇಂದ್ರಮೋದಿಯೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ.ಅಂದ ಮೇಲೆ ಬಿಜೆಪಿ ರಾಷ್ಟ್ರೀಯ ಪಕ್ಷ. ನಮ್ಮಲ್ಲಿಯೂ ವಿಭಿನ್ನ ಅಭಿಪ್ರಾಯ ಬರುವುದು ಸಹಜ. ಈಗ ಎ.ಮಂಜು ಸೇರ್ಪಡೆ ವಿಷಯದಲ್ಲೂ ಹಾಗೆ ಆಗಿದೆ‌. ಯೋಗಾ ರಮೇಶ್ ಸಿದ್ದರಾಮಯ್ಯ ಮನೆಗೆ ಊಟಕ್ಜೆ ಹೋಗಿರಬಹುದು.ಹಾಗಿದ್ದೂ ನಾವು ಯೋಗ ರಮೇಶ್ ರನ್ನು ಕೇಳುತ್ತೇವೆ. ಪಕ್ಷ ಬಿಟ್ಟು ಹೋಗುತ್ತೇವೆ ಎಂದರೆ ಸಂತೋಷವಾಗಿ ಕಳುಹಿಸಿ ಕೊಡುತ್ತೇವೆ‌ ಇಲ್ಲ ಮೋದಿಯವರನ್ನು ಪ್ರಧಾನಿ ಮಾಡಲು ಇಲ್ಲೇ ಉಳಿಯುತ್ತೇನೆ ಎಂದು ನಿರ್ಧರಿಸಿದರೆ ಸಂತೋಷ ಎಂದರು.

ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕಾನೂನು ತಜ್ಞರು.ವಿಧಾನಸಭೆಯಲ್ಲಿ ವಾಲ್ಮೀಕಿ ಬಿಟ್ಟರೆ ಇವರೇ ಎಂಬಂತೆ ಮಾತನಾಡುತ್ತಾರೆ. ಆದರೆ, ಅವರು ಇಲ್ಲಿಯವರಗೆ ಉಮೇಶ್ ಜಾದವ್ ಅವರ ರಾಜೀನಾಮೆಪತ್ರ ಏಕೆ ಅಂಗೀಕರಿಸಿಲ್ಲ ಎಂದು ಗೊತ್ತಿಲ್ಲ. ನಾನು ಕಾನೂನು ತಜ್ಞ ಅಲ್ಲ. ಆದರೂ ರಾಜೀನಾಮೆ ಅಂಗೀಕಾರಕ್ಕೆ ಅವರಿಗೆ ಇನ್ನೂ ಎಷ್ಟು ಸಮಯ ಬೇಕು ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.