ಬೆಂಗಳೂರು: ತುಮಕೂರಿನಲ್ಲಿ ದೇವೇಗೌಡರು ಸ್ಪರ್ಧಿಸಿದರೆ ಸ್ವಾಗತ-ಡಾ.ಜಿ.ಪರಮೇಶ್ವರ್‌

ಬೆಂಗಳೂರು. ಮಾರ್ಚ್ 18 - ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸ್ಪರ್ಧಿಸಿದರೆ ಸ್ವಾಗತಿಸುತ್ತೇವೆ. ಆದರೆ, ಜೆಡಿಎಸ್‌ ನ ಬೇರೊಬ್ಬರು ಈ ಕ್ಷೇತ್ರದಲ್ಲಿ ನಿಂತರೆ ಕ್ಷೇತ್ರವನ್ನು ಕಾಂಗ್ರೆಸ್‌ ಪಕ್ಷಕ್ಕೇ ಬಿಟ್ಟುಕೊಡುವಂತೆ ಕೇಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರವನ್ನು ಸದ್ಯ, ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡ ಪ್ರತಿನಿಧಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹತ್ತು ಸ್ಥಾನಗಳಲ್ಲಿ ಗೆದ್ದಿದ್ದು, ಈ ಎಲ್ಲ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದ ಅಭ್ಯರ್ಥಿಗಳನ್ನು ಬದಲಾಯಿಸುವುದು ಬೇಡವೆಂದು ಸೀಟು ಹಂಚಿಕೆ ಒಪ್ಪಂದದಲ್ಲಿ ತೀರ್ಮಾನ ಆಗಿತ್ತು. ಮಂಡ್ಯ, ಹಾಸನ ಕ್ಷೇತ್ರಗಳನ್ನು ಕಾಂಗ್ರೆಸ್‌ ಪಕ್ಷವೇ ಬೇಡ ಎಂದು ಹೇಳಿತ್ತು. ಈ ಸಂಬಂಧ ಸ್ಕ್ರೀನಿಂಗ್ ಸಮಿತಿಯಲ್ಲೂ ಚರ್ಚೆಯಾಗಿತ್ತು. ಆದರೂ, ತುಮಕೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕುರಿತಂತೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಈ ಸಂಬಂಧ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. 

ಆದರೂ, ತುಮಕೂರಿನಲ್ಲಿ ದೇವೇಗೌಡ ಅವರು ಸ್ಪರ್ಧಿಸಿದರೆ ಸ್ವಾಗತವಿದೆ. ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿರುವ ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಬೇರೊಬ್ಬರು ನಿಲ್ಲುವುದಾದರೆ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಕೋರಲಾಗುವುದು. ತುಮಕೂರು ಕ್ಷೇತ್ರವನ್ನು ಜೆಡಿಎಸ್‌, ಈಗಲೂ  ಕಾಂಗ್ರೆಸ್‌ಗೆ ಬಿಟ್ಟುಕೊಡುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. 

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಹುಲ್‌ಗಾಂಧಿ ಕಲಬುರಗಿಗೆ ಎರಡು ಬಾರಿ ಬರಲಿದ್ದಾರೆ. ಭಾರತ ಅನೇಕ ರೀತಿಯಲ್ಲಿ ಹಿನ್ನಡೆ ಕಂಡಿದೆ. ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಜಿಎಸ್‌ಟಿ, ನೋಟು ಅಮಾನ್ಯೀಕರಣ ಮತ್ತಿತರ ಕ್ರಮಗಳಿಂದ ಬಡವರು, ಸಾಮಾನ್ಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಮತದಾರರು ಈ ಚುನಾವಣೆಯಲ್ಲಿ ಇದೆಲ್ಲವನ್ನೂ ಗಮನಿಸಿ ಮತ ಚಲಾಯಿಸುವ ವಿಶ್ವಾಸವಿದೆ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.