ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಸಮ್ಮುಖದಲ್ಲಿ ಮೋದಿ ಪರ ಘೋಷಣೆ

ಬೆಂಗಳೂರು, ಮಾ 22 :  ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರೈ ನಾಮಪತ್ರ ಸಲ್ಲಿಸಿದ ನಂತರ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದರು. 

ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರಡುವ ವೇಳೆ ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ ಮತ್ತವರ ಬೆಂಬಲಿಗರು "ಮೋದಿ ಮೋದಿ"  ಎಂದು ಜೈಕಾರ ಕೂಗಿದರು. ಆಗ ಪ್ರಕಾಶ್ ರೈ ಕಾರಿನಿಂದ ಮೇಲೆ ಹತ್ತಿ "ಬೇದಿ, ಬೇದಿ" ಎಂದು ಪ್ರತಿ ಘೋಷಣೆ ಕೂಗಿದರು. ನರೇಂದ್ರ ಮೋದಿ ನೀಡಿದ್ದ ಭರವಸೆಯಂತೆ ಎಲ್ಲಿದೆ 15 ಲಕ್ಷ ರೂ ಎಂದು ತಿರುಗೇಟು ನೀಡಿದರು. 

ಇದಕ್ಕೂ ಮುನ್ನ ಸುದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರೈ, ತಮ್ಮ ಪರವಾಗಿ ಚಿತ್ರರಂಗದವರು ಪ್ರಚಾರಕ್ಕೆ ಬರುವ ಅಗತ್ಯವಿಲ್ಲ, ಇದು ನನ್ನ ಮತ್ತು ಮತದಾರನ ನಡುವೆ ನಡೆಯುವ ಸಂವಾದವಾಗಿದೆ. ನಾನೂ ಯಾರ ಪ್ರತಿಸ್ಪರ್ದಿಯೂ ಅಲ್ಲ, ಕಾಂಗ್ರೆಸ್ ಕೂಡ ಜಾತಿವಾದಿ ಪಕ್ಷವಾಗಿದೆ. ಕೇವಲ ಮುಸ್ಲಿಂ, ದಲಿತರ ಪರ ಎಂದು ಹೇಳುತ್ತಾರೆ. ಬಿಜೆಪಿಯವರೂ ಸಾವಿನ ಮನೆಯಲ್ಲೂ ಮೋದಿ ಮೋದಿ ಎಂದು ಕೂಗುತ್ತಾರೆ ಅದಕ್ಕೆ ಅರ್ಥವಿಲ್ಲ , ಒಂದು ಪಕ್ಷ ನಾನು ಗೆದ್ದು ಬಂದರೆ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದರು.