ಬೆಂಗಳೂರು: ಸ್ವತಂತ್ರ ನಿಲುವಿನ ದಿಟ್ಟ ಮಹಿಳೆ ಎಲ್ ವಿ ಶಾರದಾ: ಒಡನಾಟ ಸ್ಮರಿಸಿದ ನಟ ಸುಂದರರಾಜ್‍

 ಬೆಂಗಳೂರು, ಮಾ 22: ಗಂಡ ಸತ್ತ ಬಳಿಕ ಹೆಣ್ಣು ತಲೆ ಬೋಳಿಸಿಕೊಂಡು ಮೂಲೆ ಸೇರುತ್ತಿದ್ದ ಕಂದಾಚಾರವನ್ನು ಕ್ರಾಂತಿಕಾರಿ ರೀತಿಯಲ್ಲಿ ಬದಲಿಸಿದ ಚಿತ್ರ ‘ಫಣಿಯಮ್ಮ’.  ಪಾತ್ರ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿಬರಲು ಮುಖ್ಯಕಾರಣ ಚಿತ್ರದ ನಿರ್ದೇಶಕಿ ಪ್ರೇಮಾ ಕಾರಂತ್ ಹಾಗೂ ಫಣಿಯಮ್ಮ ಪಾತ್ರಧಾರಿ ಎಲ್.ವಿ. ಶಾರದಾ.

ಅದೆಷ್ಟೋ ಬಾಲ ವಿಧವೆಯರಿಗೆ, ಕೆಂಪು ಸೀರೆಯುಟ್ಟು ಮಡಿಯಲ್ಲಿ ಅಡುಗೆ ಮಾಡಿಕೊಂಡು ತಮ್ಮ ಪಾಡಿಗೆ ತಾವಿರುತ್ತಿದ್ದವರಿಗೆ “ಫಣಿಯಮ್ಮ” ಸ್ಫೂರ್ತಿಯಾಗಿದ್ದಳು.   ನೀಳವಾದ ತಲೆಗೂದಲನ್ನು ಬೋಳಿಸಿಕೊಂಡ ಎಲ್.ವಿ. ಶಾರದಾ ಸ್ವತಃ ಪಾತ್ರವೇ ತಾನಾಗಿ ನಟಿಸಿದ್ದರು.  

‘ಆದಿಶಂಕರಾಚಾರ್ಯ’, ‘ವಂಶವೃಕ್ಷ’, 'ನಕ್ಕಳಾ ರಾಜಕುಮಾರಿ’, 'ಒಂದು ಪ್ರೇಮದ ಕಥೆ’ಗಳಲ್ಲೂ ಮನೋಜ್ಞ ಅಭಿನಯ ನೀಡಿದ್ದಾರೆ. 'ವಾತ್ಸಲ್ಯ’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಂದಿದೆ. ನಟನೆಯಿಂದ ವಿಮುಖರಾದ ನಂತರ ಶಾರದಾ ಸಾಕ್ಷ್ಯಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು ಕೆರೆಗಳ ಬಗ್ಗೆ ಅವರು ತಯಾರಿಸಿದ 'ಕೆರೆ ಹಾಡು’ ವಿಶೇಷ ಮನ್ನಣೆಗೆ ಪಾತ್ರವಾಗಿತ್ತು.

  'ಮೈಸೂರು ವೀಣೆ’ ಕುರಿತ ಸಾಕ್ಷ್ಯಚಿತ್ರವೂ ಸೇರಿದಂತೆ ದೂರದರ್ಶನಕ್ಕಾಗಿ ಅವರು ಕೆಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದರು. ದಶಕಗಳ ಹಿಂದೆ ತ್ರಿವೆಂಡ್ರಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವರು ಜ್ಯೂರಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು.

  ಜನಪ್ರಿಯ ನಟಿಯಾದರೂ ಚಿತ್ರರಂಗದಿಂದ ದೂರ ಉಳಿದ ನಂತರ ಎಲೆ ಮರೆಯ ಕಾಯಂತೆಯೇ ಇದ್ದವರು.  ಸರಿ ಸುಮಾರು 62 ವರ್ಷ ಅವರ ಕುಟುಂಬದ ಸ್ನೇಹಿತರಾಗಿ, ಸೋದರನಂತಿದ್ದ ನಟ ಸುಂದರರಾಜ್ ಎಲ್. ವಿ. ಶಾರದಾ ಅವರ ಕುರಿತ ನೆನಪನ್ನು ಯುಎನ್ಐ ಕನ್ನಡ ಸುದ್ದಿ ಸಂಸ್ಥೆಯ ಜೊತೆ ಹಂಚಿಕೊಂಡಿದ್ದು ಹೀಗೆ. . . 

  “ಪ್ರಖ್ಯಾತ ರಾಜಕಾರಣಿ ಎಲ್.ಎಸ್. ವೆಂಕೋಜಿರಾವ್ ಹಾಗೂ ಸರಸ್ವತಿ ಬಾಯಿ ದಂಪತಿಯ 3ನೇ ಪುತ್ರಿ ಎಲ್.ವಿ. ಶಾರದಾ.   ಗಾಂಧಿಬಜಾರಿನ ಕರಣೀಕರ ರಸ್ತೆಯ ಬ್ರಾಹ್ಮಣರ ಬೀದಿಯಲ್ಲಿದ್ದಾಗ, ಹಣ್ಣುಗಳನ್ನು ಕೀಳಲು, ಕಾಮನ ಹಬ್ಬಕ್ಕೆ ಚಂದಾ ಸಂಗ್ರಹಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ಶಾರದಾ ಹಾಗೂ ಅವರ ಮನೆಯವರ ಪರಿಚಯವಾಯ್ತು.  ನಿರಂತರ 60 ವರ್ಷಗಳ ಕಾಲ ಈ ಸ್ನೇಹ, ಅನುಬಂಧ ಮುಂದುವರೆಯಿತು.  ಆದರೆ ಆಕೆಯ ದಿಢೀರ್ ಸಾವಿನ ಸುದ್ದಿ ಆಘಾತವುಂಟು ಮಾಡಿತು.  ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದವರು ಗುಣಮುಖರಾಗದೆ ವಿಧಿವಶರಾದರು” ಎಂದರು.

  -:ಬಹುಮುಖ ಪ್ರತಿಭೆ:-

  ಎಲ್.ವಿ. ಶಾರದಾ ಅವರದು ಬಹುಮುಖ ಪ್ರತಿಭೆ.  ಮನೆಯಲ್ಲಿ ಎಲ್ಲರೂ ಸಂಗೀತ ಕಲಿತಿದ್ದರಿಂದ ಆಕೆಯೂ ಚೆನ್ನಾಗಿ ಹಾಡುತ್ತಿದ್ದರು. ಬಿಎ ಎಲ್ ಎಲ್ ಎ ಬಿ ಮುಗಿಸಿದ್ದ ಬುದ್ಧಿವಂತೆ. ರಂಗಭೂಮಿ, ಚಲನಚಿತ್ರಗಳಲ್ಲಿ ನಟನೆಯ ಜತೆಗೆ ಸ್ವತಃ ವೀಣೆ ಕಲಿತು ನುಡಿಸುತ್ತಿದ್ದರು.  ಅಲ್ಲದೆ ರುಚಿ ರುಚಿಯಾದ ಅಡುಗೆ, ತಿಂಡಿ ಮಾಡುವ ಪಾಕ ಪ್ರವೀಣೆಯೂ ಆಗಿದ್ದರು ಎಂದು ನೆನಪಿಸಿಕೊಂಡವರು ಶಾರದಾ ಅವರ ಅಕ್ಕನ ಮಗಳು ಉಷಾ.

  ಹೆಣ್ಣು ಮದುವೆಯಾಗದೆಯೂ ಸ್ವತಂತ್ರವಾಗಿ ಬದುಕಬಹುದೆಂಬ ದಿಟ್ಟ ನಿಲುವು ತಳೆದು ಅವಿವಾಹಿತೆಯಾಗಿಯೇ ಉಳಿದ ಶಾರದಾ, ತಾವಂದುಕೊಂಡಂತೆಯೇ ಯಾರಿಗೂ ಭಾರವಾಗದೆ ಬದುಕಿದರು. 

  -:ಆತ್ಮಚರಿತ್ರೆ ಪೂರ್ಣವಾಗಿಲ್ಲ. …

  ಬಾಲನಟಿಯಾಗಿ ‘ಆಷಾಢಭೂತಿ’ ನಾಟಕದಲ್ಲಿ ಕಾಣಿಸಿಕೊಂಡಿದ್ದ ಎಲ್.ವಿ. ಶಾರದಾ, ‘ಸಂಸ್ಕಾರ’ ಚಿತ್ರದ ನಂತರ ಆರಂಭವಾದ ನವ್ಯದ ಅಲೆಯಲ್ಲಿ ಚಿತ್ರರಂಗಕ್ಕೆ ಬಂದವರು.  ತಮ್ಮ ಬದುಕಿನ ಸುದೀರ್ಘ ಪಯಣ, ಸಿಹಿ, ಕಹಿ, ರಂಗಭೂಮಿ, ಸಿನಿ ಬದುಕನ್ನು ಆತ್ಮಚರಿತ್ರೆಯಲ್ಲಿ ಸವಿಸ್ತಾರವಾಗಿ ಜನರ ಮುಂದಿಬೇಕೆಂದು ಬಯಸಿದ್ದರು.  ಆದರೆ ಅದು ಪೂರ್ಣಗೊಳ್ಳುವ ಮೊದಲೇ ಕೊನೆಯುಸಿರೆಳೆದಿದ್ದು ನಿಜಕ್ಕೂ ವಿಷಾದನೀಯ,

  -:ಬಿಡಿಎ ಸೈಟು ಸಿಗಲೇ ಇಲ್ಲ:-

  ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ಬಿಡಿಎ ಸೈಟು ಕೊಡುವ ಸರ್ಕಾರದ ಭರವಸೆ ಎಲ್.ವಿ. ಶಾರದಾ ಪಾಲಿಗೆ ಭರವಸೆಯಾಗಿಯೇ ಉಳಿಯಿತು.  “ಎಲ್ಲಿ ಅಲೆಯೋದು, ಯಾರ ಬಳಿಗೆ ಹೋಗೋದು.  ಮಾತು ಕೊಡುವ ಸರ್ಕಾರ ಅದನ್ನು ಪಾಲಿಸದೆ ವಂಚಿಸುವುದು ಎಷ್ಟರಮಟ್ಟಿಗೆ ಸರಿ” ಎಂದು ನಟ, ಹಿತೈಷಿ ಸುಂದರ ರಾಜ್ ಬಳಿ ಹೇಳಿಕೊಂಡಿದ್ದರಂತೆ ಶಾರದಾ. 

  ಎಷ್ಟೇ ನೋವು ಸಂಕಷ್ಟವಿದ್ದರೂ ಒಂಟಿಯಾಗಿಯೇ ನಿಭಾಯಿಸಿ, ಲವಲವಿಕೆಯಿಂದಿರುತ್ತ, ಸಾಕ್ಷ್ಯಚಿತ್ರಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಚಟುವಟಿಕೆಯಿಂದಿದ್ದವರು. 2018 ಮಾರ್ಚ್ 21ರಂದು ವಿಧಿವಶರಾದ ಎಲ್.ವಿ. ಶಾರದಾ ಅವರ ಅಂತ್ಯಕ್ರಿಯೆಯನ್ನು ಸೋದರ ಪ್ರಭಾಕರ ನೆರವೇರಿಸಿದ್ದಾರೆ.  ಆಕೆಯಿಲ್ಲದ ನೋವನ್ನು ಮರೆಯುವ ಪ್ರಯತ್ನದಲ್ಲಿದ್ದಾರೆ. ಅವರಿಗೆಲ್ಲ ದುಃಖ ಭರಿಸುವ ಶಕ್ತಿ ಸಿಗಲೆಂದು ಹಾರೈಸೋಣ.