ಬಳ್ಳಾರಿ: 30125 ಮತಗಳ ಅಂತರದ ಜಯ

ಲೋಕದರ್ಶನ ವರದಿ

ಬಳ್ಳಾರಿ 09: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿಜಯಲಕ್ಷ್ಮೀ ಬಿಜೆಪಿ ಅಭ್ಯರ್ಥಿ  ಆನಂದಸಿಂಗ್ ಅವರಿಗೆ ಒಲಿದಿದ್ದಾಳೆ. 30125 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಸೋಮವಾರ ನಡೆದ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಅತ್ಯಂತ ಸುಸೂತ್ರವಾಗಿ ನಡೆಯಿತು. ಬೆಳಗ್ಗೆ 8ಕ್ಕೆ ಆರಂಭವಾದ ಮತ ಎಣಿಕೆಯು ಮಧ್ಯಾಹ್ನ 1ರವರೆಗೆ ನಡೆಯಿತು. ಮಧ್ಯಾಹ್ನ 1:30ಕ್ಕೆ ಚುನಾವಣಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅವರು ಚುನಾವಣಾ ಫಲಿತಾಂಶವನ್ನು ಪ್ರಕಟಿಸಿ ಅಧಿಕೃತವಾಗಿ ಬಿಜೆಪಿ ಅಭ್ಯಥರ್ಿ ಆನಂದಸಿಂಗ್ ಅವರು ಗೆಲುವು ಸಾಧಿಸಿದ್ದಾರೆ ಎಂದು ಪ್ರಕಟಿಸಿದರು. 

14 ಟೇಬಲ್ಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆಯಿತು. ಆರಂಭದ ಸುತ್ತಿನಿಂದಿಡಿದು 18ನೇ ಸುತ್ತಿನವರೆಗೆ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಸಾಧಿಸಿದರು.

ಬಿಜೆಪಿ ಅಭ್ಯರ್ಥಿ  ಆನಂದಸಿಂಗ್ ಅವರು 85477 ಮತಗಳನ್ನು ಪಡೆಯುವುದರ ಮೂಲಕ 30125 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿ.ವೈ.ಘೋರ್ಪಡೆ ಅವರನ್ನು ಸೋಲಿಸಿದರು. ಘೋರ್ಪಡೆ ಅವರು 55352 ಮತಗಳು ಪಡೆಯುವುದರ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಜೆಡಿಎಸ್ ಅಭ್ಯರ್ಥಿಯಾಗಿದ್ದ ಎನ್.ಎಂ.ನಬಿ ಅವರು 3885 ಮತಗಳನ್ನು ಎನ್ಸಿಪಿಯ ಮಮತಾ ಅವರು 431 ಮತಗಳು, ಕರ್ನಾಟಕ ರಾಷ್ಟ್ರ ಸಮಿತಿಯ ಪ.ಯ.ಗಣೇಶ ಅವರು 433 ಮತಗಳು, ಉತ್ತಮ ಪ್ರಜಾಕೀಯ ಪಕ್ಷದ ಮಹೇಶ ಲಂಬಾಣಿ ಅವರು 430, ಪಕ್ಷೇತರ ಅಭ್ಯರ್ಥಿಗಳಾದ ಅಲಿ ಹೊನ್ನೂರ ಅವರು 303, ಕೆ.ಉಮೇಶ ಅವರು 134, ಕವಿರಾಜ್ ಅರಸು 3955, ಕಿಚಡಿ ಕೊಟ್ರೇಶ್ ಅವರು 793, ಕಂಡಕ್ಟರ್ ಪಂಪಾಪತಿ ಅವರು 261, ದೇವರಕೊಂಡಿ ಮಾರ್ಕಂಡಪ್ಪ ನೇಕಾರ್ ಅವರು 655, ಸಿ.ಎಂ.ಮಂಜುನಾಥ ಸ್ವಾಮಿ ಅವರು 307 ಮತಗಳನ್ನು ಪಡೆದುಕೊಂಡಿದ್ದಾರೆ. 1821 ಮತದಾರರು ನೋಟಾಗೆ ಅಸ್ತು ಎಂದಿದ್ದಾರೆ.

ಪೊಸ್ಟಲ್ ಬ್ಯಾಲೇಟ್ ಮತ್ತು ಇಟಿಬಿಪಿಎಸ್ (266) ಸೇರಿ 154242 ಮತದಾರರು ಮತದಾನ ಮಾಡಿದ್ದರು. 4 ಪೊಸ್ಟಲ್ ಬ್ಯಾಲೆಟ್ ಮತ್ತು ಇಟಿಬಿಪಿಎಸ್ ಮತಗಳು ತಿರಸ್ಕೃತವಾಗಿವೆ.

ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ ನಂತರ ಮಾತನಾಡಿದ ಚುನಾವಣಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅವರು ಮತ ಎಣಿಕೆ ಪ್ರಕ್ರಿಯೆ ಅತ್ಯಂತ ಸುಸೂತ್ರವಾಗಿ ಜರುಗಿದ್ದು, ಈ ಚುನಾವಣಾ ಕಾರ್ಯ ಸೂಸುತ್ರವಾಗಿ ಜರುಗುವ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿಯಾದ ಆನಂದಸಿಂಗ್ ಅವರ ಪರವಾಗಿ ಅವರ ಅಭ್ಯರ್ಥಿ  ಏಜೆಂಟ್ರಾದ ಮದುಸೂಧನ್ಸಿಂಗ್ ಅವರಿಗೆ ವಿಜೇತ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.