ಬಳ್ಳಾರಿ: ಸ್ವಚ್ಛ ನಗರ ಸದ್ದಿಲ್ಲದೇ ಸ್ವಚ್ಛವಾಗುತ್ತಿರುವ ಬಳ್ಳಾರಿ

ಲೋಕದರ್ಶನ ವರದಿ

ಬಳ್ಳಾರಿ 18: ಗಣಿನಾಡು ಬಳ್ಳಾರಿಯಲ್ಲಿ ಭಿತ್ತಿ ಚಿತ್ರಗಳು ಜಾಹೀರಾತು ಫಲಕಗಳದ್ದೇ ಕಾರುಬಾರು. ಈ ಭಿತ್ತಿ ಚಿತ್ರಗಳನ್ನು ಎಲ್ಲಂದರಲ್ಲಿ ಅಂಟಿಸಿ ನಗರದ ಸೌಂದರ್ಯ ಹಾಳಾಗುತ್ತಿತ್ತು. ಉಕ್ಕಿನ ನಗರಿ ಬಳ್ಳಾರಿ ತ್ವರಿತ ಗತಿಯಲ್ಲಿ ಬೆಳೆಯುತ್ತಿದ್ದರೂ ನಗರದಬಸ್ ನಿಲ್ದಾಣಗಳು ಮಾತ್ರ ಸ್ವಚ್ಛತೆಯಲ್ಲಿ ಅಧೋಗತಿ ತಲುಪಿವೆ. ಇದನ್ನು ಮನಗಂಡ ಯುವಾ ಬ್ರಿಗೇಡ್ ತಂಡ ನಗರದ ಬಸ್ ನಿಲ್ದಾಣಗಳ, ವಿವಿಧ ಸ್ಮಾರಕಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ. 

"ಸ್ವಚ್ಛ ನಗರ" ಎಂಬ ಧ್ಯೇಯ ವಾಕ್ಯದಡಿ ನಗರದ ಸತ್ಯನಾರಾಯಣ ಪೇಟೆಯ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದ ಬಸ್ ನಿಲ್ದಾಣ ಮತ್ತು ಅದರ ಸುತ್ತಮುತ್ತ ಸ್ವಚ್ಛಗೊಳಿಸಿದ್ದಲ್ಲದೇ ನಿಲ್ದಾಣದ ಗೋಡೆಗೆಅಂಟಿಸಲಾಗಿದ್ದ ಸಿನಿಮಾ ಹಾಗೂ ಇತರೆ ವಾಣಿಜ್ಯ ಜಾಹೀರಾತುಗಳನ್ನು ತೆಗೆದು ಹಾಕಿದ್ದಾರೆ.ಯುವಾ ಬ್ರಿಗೇಡ್ನ ಸದಸ್ಯರು ಕೇವಲ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡುವುದಲ್ಲದೆ ತಾವುಗಳು ಸ್ವಚ್ಛ ಮಾಡಿದ ಜಾಗಗಳನ್ನು ಸುಂದರ ಸ್ಥಳಗಳಾಗಿ ಮಾರ್ಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. 

ಯುವಾ ಬ್ರಿಗೇಡ್ ತಂಡ ಬಸ್ ನಿಲ್ದಾಣಗಳಷ್ಟೇ ಅಲ್ಲದೇ, ಕಣಕಣದಲ್ಲೂ ಶಿವ ಎಂಬ ಕಲ್ಪನೆಯಡಿ ದೇವಸ್ಥಾನಗಳ ಬಳಿ ಇಟ್ಟುಹೋದ ದೇವರ ಫೋಟೋಗಳನ್ನು ಆಯ್ದು ಅವುಗಳ ಫ್ರೇಮ್, ಗಾಜುಗಳನ್ನು ಬೇರ್ಪಡಿಸಿ ದೇವರ ಭಾವ ಚಿತ್ರಗಳನ್ನು ಆಳವಾದ ಗುಂಡಿಯಲ್ಲಿ ಮುಚ್ಚಿ ಅದರ ಮೇಲೆ ಸಸಿಯನ್ನು ನೆಟ್ಟು ಜನರಲ್ಲಿ ದೇವರ ಬಗೆಗಿನ ಧಾರ್ಮಿಕ ಭಾವನೆಯನ್ನು ಸ್ಥಿರವಾಗಿಸುವ,ಸೈನಿಕ ಸ್ಮಾರಕಗಳುನ್ನು ಸ್ವಚ್ಛಗೊಳಿಸಿ ಸ್ಮಾರಕಗಳನ್ನು ಕಾಯ್ದುಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.  

ತಮ್ಮ ಬಿಡುವಿನ ಸಮಯದಲ್ಲಿ ಈ ಯುವಕರ ಪಡೆ ಒಂದೊಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಯುವಾ ಬ್ರಿಗೇಡ್ ನಲ್ಲಿ ಬಹುತೇಕವಾಗಿ ಯುವಕರೇ ಇದ್ದು ಭಾನುವಾರದಲ್ಲಿ ಸಿನಿಮಾ ನೋಡಿ ಕಾಲಹರಣ ಮಾಡದೇ ನಗರವನ್ನು ಸ್ವಚ್ಛ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಯುವಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.