ಬಳ್ಳಾರಿ: ವ್ಯಾಸರಾಜ ವೃಂದಾವನ ಧ್ವಂಸ ಪ್ರಕರಣ: ಆರೋಪಿಗಳ ಬಂಧನ

ಲೋಕದರ್ಶನ ವರದಿ

ಬಳ್ಳಾರಿ 22: ತಾಲೂಕಿನ ಆನೆಗೊಂದಿ ಬಳಿಯ ನವ ವೃಂದಾವನಗಡ್ಡಿಯಲ್ಲಿ ವ್ಯಾಸರಾಜರ ಮೂಲ ವೃಂದಾವನವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. 

ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನವನ್ನು ಧ್ವಂಸಗೊಳಿಸಿದ್ದರು. ಆರೋಪಿಗಳ ಪತ್ತೆಗಾಗಿ ಕೊಪ್ಪಳ ಎಸ್ಪಿ ರೇಣುಕಾ ಸುಕುಮಾರ ಅವರು 5 ವಿಶೇಷ ತಂಡಗಳನ್ನು ರಚಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಂಧ್ರ ಪ್ರದೇಶದ ತಾಡಪತ್ರಿ ಗ್ರಾಮದ ಪೊಲ್ಲಾರಿ ಮುರಳಿ ಮೋಹನ ರೆಡ್ಡಿ, ಮನೋಹರ, ಕುಮ್ಮಟಕೇಶವ, ವಿಜಯ ಕುಮಾರ, ಬಾಲನರಸಯ್ಯ ಎಂಬುವವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. 

ಇವರು ನಿಧಿ ಶೋಧನೆಗಾಗಿ ವ್ಯಾಸರಾಜರ ವೃಂದಾವನ ಧ್ವಂಸ ಮಾಡಿದ್ದರು ಎಂದು ತಿಳಿದು ಬಂದಿದೆ. 

ನವ ವೃಂದಾವನದಲ್ಲಿ ದುಷ್ಕರ್ಮಿಗಳಿಂದ ಧ್ವಂಸವಾಗಿದ್ದ ಶ್ರೀವ್ಯಾಸರಾಜ ತೀರ್ಥರ ವೃಂದಾವನವನ್ನು ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶ ತೀರ್ಥರು, ಮಂತ್ರಾಲಯ ಮಠದ ಶ್ರೀಸುಬುಧೇಂದ್ರ ತ್ರೀರ್ಥರು, ಉತ್ತರಾದಿ ಮಠದ ಶ್ರೀಸತ್ಯಾತ್ಮ ತೀರ್ಥರು ಮತ್ತು ಶ್ರೀವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥರ ಸಂಕಲ್ಪದಂತೆ 24 ತಾಸಿನೊಳಗೆ ಮರು ನಿರ್ಮಾಣ ಮಾಡಿ ಶುಕ್ರವಾರ ಸಂಜೆ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಗಿತ್ತು. 

ವ್ಯಾಸರಾಜರ ಮೂಲ ವೃಂದಾವನವನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ಸಂಘಟನೆಗಳು ರಾಜ್ಯಾಧ್ಯಂತ ಪ್ರತಿಭಟನೆ ನಡೆಸಿದ್ದರು.