ಬಳ್ಳಾರಿ: ಪ್ರತಿಭೆ ಅನಾವರಣಕ್ಕೆ ಪಾಲಕ ಸಹಕಾರ ಅಗತ್ಯ: ಡಾ.ಗೋವಿಂದ

ಲೋಕದರ್ಶನ ವರದಿ

ಬಳ್ಳಾರಿ 01: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಪಾಲಕ ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಬೇಕಾದುದು ಅಗತ್ಯವಾದುದಾಗಿದೆ ಎಂದು ಸಂಗೀತ ವಿಭಾಗದ ಮುಖ್ಯಸ್ಥ ಡಾ.ಗೋವಿಂದ ನುಡಿದರು. 

ಈಚೆಗೆ ಕಮಲಾಪುರದ ಜೈ ಭೀಮ್ ನಗರದ ಬುದ್ದವನದ ಆವರಣದಲ್ಲಿ ವೀಣಾ ಶ್ರೀ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಂಡಿತ್.ಪಂಚಾಕ್ಷರಿ ಗವಾಯಿಗಳವರ ಜನ್ಮದಿನಾಚರಣೆ ಹಾಗೂ ಕು.ಸಾವಿತ್ರಿ ಅವರ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಉತ್ತರ ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಪ್ರವೇಶ ಪಡೆಯಲು ಖ್ಯಾತ ಗವಾಯಿಗಳಾದ ಪಂಚಾಕ್ಷರಿಗವಾಯಿಗಳು ಮತ್ತು ಪಂಡಿತ್ ಪುಟ್ಟರಾಜ ಗವಾಯಿಗಳು ಎಂದು ಹೇಳಿದರೆ ತಪ್ಪಾಗಲಾರದು. ಸಂಗೀತಕ್ಕೆ ಮನೋರೋಗವನ್ನು ವಾಸಿಮಾಡುವ ಶಕ್ತಿ ಹೊಂದಿದೆ ಎಂದು ತಿಳಿಸಿದರು.  

ಇದೇ ವೇಳೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಿಕ್ಷಕ ಅಂಬಣ್ಣ ಮಾತನಾಡಿ ಈಚೆಗೆ ಕಲಾ ಆರಾಧನೆ ಕಡಿಮೆ ಆಗುತ್ತಿದೆ. ಇಂತಹ ಕಾರ್ಯಕ್ರಮದಿಂದ ಜೀವನಯೋಗ ಮತ್ತು ಅಧ್ಯಾತ್ಮ ವಾತಾವರಣವನ್ನು ಮೂಡಿಸುತ್ತದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್ ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮ ಸಂಗೀತ ಕೇಳಿದರೆ ಮನಸ್ಸು ಉಲ್ಲಾಸವಾಗುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕು.ಸಾವಿತ್ರಿ ಭಾವಗೀತೆಯನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು ಹಾಗೇನೆ ರೇಣುಕಾ, ಉಷಾ, ಮೀನಾಕ್ಷಿ, ದಾಕ್ಷಾಯಿಣಿ, ಶರಣಮ್ಮ, ದುರುಗಮ್ಮ ಸುಗಮ ಸಂಗೀತ ನಡೆಸಿಕೊಟ್ಟು ನೆರೆದವರ ಮನತಣಿಸಿದರು. ವೇದಿಕೆಯ ಮೇಲೆ ಸಂಗೀತ ಅಧ್ಯಾಪಕರಾದ ತಿಮ್ಮಣ್ಣ ಮಾನ್ಪಡೆ, ಶಿಕ್ಷಕಿ ಗಾದಿಲಿಂಗಮ್ಮ ದೇವರಾಜ್, ಶ್ರೀನಿವಾಸ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ ಇನ್ನಿತರರು ಹಾಜರಿದ್ದರು. ಆರಂಭದಲ್ಲಿ ವೀರೇಶ್ ದಳವಾಯಿ ಸ್ವಾಗತಿಸಿದರೆ, ರೇಣುಕಮ್ಮ ನಿರೂಪಿಸಿ, ಉಷಾ ವಂದಿಸಿದರು.