ಬಳ್ಳಾರಿ: ಸಾರ್ವಜನಿಕ ಸ್ಥಳದಲ್ಲಿ ಧೂಮ್ರಪಾನ: ಕ್ರಮಕ್ಕೆ ಒತ್ತಾಯ

ಈ.ಜಿ.ರೆಡ್ಡಿ ಚರಕುಂಟೆ

ಬಳ್ಳಾರಿ 17: ಸಾರ್ವಜನಿಕ ಸ್ಥಳದಲ್ಲಿ ಧೂಮ್ರಪಾನ ಮಾಡಿದರೆ ರೂ ಎರಡು ನೂರು ಇದ್ದ ದಂಡ ಎರಡು ಸಾವಿರ ಆಗಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೂ ಜನನಿಬಿಡ ಪ್ರದೇಶದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ, ಹೊಟೆಲ್ಗಳ ಮುಂಭಾಗದಲ್ಲಿ ಪಾನ್ಬೀಡ ಅಂಗಡಿಗಳು ಸೇರಿದಂತೆ ನಗರದ ಎಲ್ಲಾ ಕಡೆ ಎಗ್ಗಿಲ್ಲದೆ ಧೂಮ್ರಪಾನ ಮಾಡುತ್ತಿದ್ದಾರೆ. 

ಸಾರ್ವಜನಿಕರಿಗೆ, ಮಹಿಳೆಯರಿಗೆ, ವಿದ್ಯಾಥರ್ಿನಿಯರಿಗೆ ಇದರಿಂದ ತುಂಬಾ ತೊಂದರೆ ಯಾದರೂ ಸಹಿಸಿಕೊಂಡು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮ್ರಪಾನ ಮಾಡಬಾರದು ಎಂದು ದೇಶದ ಸವರ್ೋಚ್ಚ ನ್ಯಾಯಾಲಯದ ಆದೇಶವಿದ್ದರೂ ಇದನ್ನು ಯಾರೂ ಕೂಡ ಪಾಲಿಸುತ್ತಿಲ್ಲ. 

ಬೀಡ ಅಂಗಡಿ ಯವರು ಸಹ ಬಿಡಿ ಬಿಡಿಯಾಗಿ ಬೀಡಿಯನ್ನಾಗಲಿ, ಸಿಗರೇಟ್ಗಳನ್ನಾಗಲಿ  ಮಾರಬಾರದು ಎಂಬ ಕಾನೂನಿದೆ ಇದನ್ನು ಕೂಡ ಯಾವ ಅಂಗಡಿಯವರು ಪಾಲಿಸುತ್ತಿಲ್ಲ. 

ಇದರಿಂದ ಅಪ್ರಾಪ್ತ ಶಾಲಾ ಮಕ್ಕಳು ಸಹ ಸಿಗರೇಟ್ ಬಿಡಿಯಾಗಿ ಖರೀದಿಸಿ ನಗರದ ಹಳೆ ಬಸ್ಟ್ಯಾಂಡ್ ಎದುರುಗಡೆ, ಮಯೂರ ಹೊಟೆಲ್ ಮುಂಭಾಗ, ಓಂ ಸ್ವೀಟ್ಸ್ ಹತ್ತಿರ, ಜಂತಕಲ್ ಬಿಲ್ಡಿಂಗ್ ಮುಂಭಾಗದಲ್ಲಿ ಮತ್ತು ಒಳಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸೇದುತ್ತಾ ಇದೊಂದು ಧೂಮಪಾನ ವಲಯವೆಂಬಂತೆ ಯಾರ ಭಯವಿಲ್ಲದೆ ಸಿಗರೇಟ್ ಸೇದುತ್ತಾ ತಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವನ್ನು ಹಾಳು ಮಾಡುತ್ತಾ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. 

ಧೂಮಪಾನಿಗಳಿಗಿಂತ ಅವರ ಪಕ್ಕದವರಿಗೆ ಅದರ ಪರಿಣಾಮ ಹೆಚ್ಚಾಗುತ್ತದೆ. ಸಣ್ಣ ಸಣ್ಣ ಮಕ್ಕಳು ಸಹ ಈ ಬೀಡಿ ಸಿಗರೇಟ್ ಹೊಗೆಯಿಂದ ಆರೋಗ್ಯ ಹದಗೆಡುತ್ತದೆ. ಅಲ್ಲದೆ ಮುಖ್ಯವಾಗಿ ಕೋಲಾಚಲಂ ಕಾಂಪೌಂಡ್ ಪ್ರದೇಶದಲ್ಲಿ ಹೆಚ್ಚಾಗಿ ಡಾಕ್ಟರ್ ಇರುವುದರಿಂದ ಚಿಕ್ಕ ಚಿಕ್ಕ ಮಕ್ಕಳನ್ನು ವಿವಿಧ ಚಿಕಿತ್ಸೆಗೆ ಕರೆತಂದಿರುತ್ತಾರೆ. ಧೂಮಪಾನ ಇವರ ಮೇಲೆ ದುಷ್ಪರಿಣಾಮ ಬೀರಿ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. 

ಆದಕಾರಣ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಸಾರ್ವಜನಿಕವಾಗಿ ಬೀಡಿ ಸಿಗರೇಟ್ ಸೇದುವವರನ್ನು ಹಿಡಿದು ರೂ ಎರಡು ಸಾವಿರ ದಂಡ ವಿಧಿಸಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದೇನೆ.