ಲೋಕದರ್ಶನ ವರದಿ
ಬಳ್ಳಾರಿ 31: ಮಾನ್ಯ ಮುಖ್ಯಮಂತ್ರಿಗಳು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಿರುವ ಹಿನ್ನೆಲೆ ತಮ್ಮ ಇಲಾಖೆಗಳ ಮೇ ಅಂತ್ಯದವರೆಗಿನ ಸಮರ್ಪಕ ಮಾಹಿತಿಯನ್ನು ಜೂ.1ರ ಸಂಜೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ಅಸಮರ್ಪಕ ಮಾಹಿತಿ ನೀಡಿದರೇ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಪಂ ಸಿಇಒ ಕೆ.ನಿತೀಶ್ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜೂನ್ ಎರಡನೇ ವಾರದಲ್ಲಿ ನಡೆಯಲಿರುವ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳೊಂದಿಗಿನ ಸಮ್ಮೇಳನ ಸಭೆಯ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರ ಆತ್ಮಹತ್ಯೆ, ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಷಯದಲ್ಲಿ ಮುಖ್ಯಮಂತ್ರಿಗಳು ತುಂಬಾ ಗಂಭೀರವಾಗಿ ಪರಿಗಣಿಸಲಿದ್ದು, ಅಂತವುಗಳೆನಾದರೂ ಇದ್ದಲ್ಲಿ ಎರಡ್ಮೂರು ದಿನದೊಳಗೆ ಕ್ರಮಕೈಗೊಂಡು ಅದರ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ರೈತರ ಸಾಲಮನ್ನಾ, ಮೇವು, ಮೇವು ಬ್ಯಾಂಕ್ ಹಾಗೂ ಇನ್ನೀತರ ವಿಷಯಗಳ ಕುರಿತು ಸಮರ್ಪಕ ಮಾಹಿತಿ ಶೀಘ್ರ ಒದಗಿಸಿ ಎಂದರು.
ಈಗಾಗಲೇ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ನೀಡಲಾಗಿರುವ ಫರ್ಮೆಟ್ (ಅನುಬಂಧ) ಅನುಸಾರವಾಗಿಯೇ ಮಾಹಿತಿ ನೀಡಿ ಎಂದು ಹೇಳಿದ ಅವರು ಸಭೆ ಇದೆಯೆಂದು ಮಾಹಿತಿ ನೀಡಿದರೂ ಗೈರುಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಅವರು ಸೂಚಿಸಿದರು.
ಲೋಕೋಪಯೋಗಿ, ಡಿಯುಡಿಸಿ, ಬಿಸಿಎಂ, ಕೃಷಿ, ತೋಟಗಾರಿಕೆ, ಕೈಗಾರಿಕೆ, ಸಮಾಜಕಲ್ಯಾಣ ಇಲಾಖೆ, ಕಂದಾಯ, ಪಶುಸಂಗೋಪನೆ, ಅಲ್ಪಸಂಖ್ಯಾತ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಪಡೆದುಕೊಂಡ ಅವರು ಲೆಟಸ್ಟ್ ಮಾಹಿತಿಯನ್ನು ನಾಳೆಯೊಳಗೆ ಒದಗಿಸುವಂತೆ ತಿಳಿಸಿದರು. ಜೂ.4ರಂದು ಪ್ರಾದೇಶಿಕ ಆಯುಕ್ತರು ಬಳ್ಳಾರಿಗೆ ಆಗಮಿಸಿ ಸಭೆ ನಡೆಸಿ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.