ಲೋಕದರ್ಶನ ವರದಿ
ಬಳ್ಳಾರಿ 19: ನನಗೂ ಸಚಿವ ಸ್ಥಾನ ಕಲ್ಪಿಸುವಂತೆ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠದ ಹತ್ತಿರ ಮನವಿ ಮಾಡಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಆಶಾವಾದಿಯಾಗಿರುವುದಾಗಿ ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ರಾಜ್ ಸಂಸ್ಥೆಗಳ ಸಮಿತಿ ಸಭೆಯ ನಂತರ ಮಾತನಾಡಿದರು.
ಹರಪನಳ್ಳಿಯನ್ನು ಜಿಲ್ಲೆ ಮಾಡಬೇಕೆಂಬ ಒತ್ತಾಯವಿದೆ. ಈ ಕುರಿತು ಸಂಘ-ಸಂಸ್ಥೆಗಳ ಮುಖಂಡರು, ಹೋರಾಟಗಾರರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ನಿರ್ಧರಿಸಿದ್ದು, ಸಮಯ ಕೇಳಿದ್ದೇವೆ ಎಂದು ವಿವರಿಸಿದರು.
ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಬೇಕೆಂಬುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಒಂದು ಸಭೆಯಾಗಿದ್ದು, ಪರ-ವಿರೋಧ ಅಂಶಗಳು ವ್ಯಕ್ತವಾಗಿವೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉಪಚುನಾವಣೆಯ ನಂತರ ಜಿಲ್ಲೆಯ ಶಾಸಕರು,ಮಾಜಿ ಶಾಸಕರು,ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಹೋರಾಟಗಾರರು ಸೇರಿದಂತೆ ಸರ್ವರ ಅಭಿಪ್ರಾಯ ಆಲಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ರಾಜ್ ಸಂಸ್ಥೆಗಳ ಸಮಿತಿ ಸದಸ್ಯರು ಇದ್ದರು.