ಲೋಕದರ್ಶನ ವರದಿ
ಬಳ್ಳಾರಿ 28: ಸ್ಥಳೀಯ ಕೌಲ್ಬಜಾರ್ ಪ್ರದೇಶದ ಬಂಡಿಹಟ್ಟಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಳೆಯ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿರುವ ಘಟನೆ ಶನಿವಾರಂದು ಜರುಗಿದೆ.
ಬೆಳಗಿನ ಜಾವ ಸುರಿದ ಭಾರೀ ಮಳೆಯಿಂದ ಬಂಡಿಹಟ್ಟಿ ಪಕ್ಕದಲ್ಲಿ ಹರಿಯುತ್ತಿರುವ ದೊಡ್ಡ ಹಳ್ಳದ ನೀರು ಡಾಲರ್ಸ್ ಕಾಲೋನಿ, ಈಡಿಗರ ಓಣಿ, ಸೇರಿದಂತೆ ವಿವಿಧ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಇದರಿಂದ ಮನೆಗಳಲ್ಲಿ ನೀರು ಸಂಗ್ರಹಗೊಂಡು ಬಡಜನರ ಆಹಾರ, ಬಟ್ಟೆ, ಪಾತ್ರ ಪಗಡಗಳು, ಎತ್ತಿನ ಬಂಡಿ, ಓಮಿನಿ ಕಾರು ಕೊಚ್ಚಿಹೋಗಿವೆ. ಅಲ್ಲದೆ ಕಾಸೀಮ್ ಎಂಬುವವರ ಮನೆಯು ಕುಸಿದು ಬಿದ್ದಿದೆ. ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅವರು ಮಳೆಯಿಂದ ಹಾನಿಗೀಡಾದ ಜನರಿಗೆ ಸಮಾಧಾನ ಹೇಳಿ ಪರಿಸ್ಥಿತಿಯನ್ನು ಅವಲೋಕಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಪರಿಹಾರ ನೀಡುವ ಭರವಸೆಯನ್ನು ನೀಡಿದರು.
ಸಂದರ್ಭದಲ್ಲಿ ಬಂಡಿಹಟ್ಟಿಯ ಕಾಂಗ್ರೆಸ್ ಮುಖಂಡರಾದ ಕೆ.ಸತೀಶ್, ಬಿಸೋಮು, ಕೆ.ವೆಂಕೋಬ, ಎ.ಡಿ.ಸಬೆಸ್ಟೀನ್, ಶಿವಶರಣ, ವೀರೇಶ್ ಮುಂತಾದವರು ಹಾಜರಿದ್ದು ಪರಿಸ್ಥಿತಿಯನ್ನು ವಿವರಿಸಿದರು.