‘ಹಿಂದೂ ಧರ್ಮ ಪ್ರವೇಶಕ್ಕೆ ವೀರಶೈವ ಸಿದ್ಧಾಂತ ಪ್ರವೇಶದ್ವಾರವಾಗಿದೆ’

‘ಹಿಂದೂ ಧರ್ಮ ಪ್ರವೇಶಕ್ಕೆ ವೀರಶೈವ ಸಿದ್ಧಾಂತ ಪ್ರವೇಶದ್ವಾರವಾಗಿದೆ’ ‘Veerashaiva ideology is the gateway to entering Hinduism’

ಲೋಕದರ್ಶನ ವರದಿ 

ಅಥೆನ್ಸ್‌ 29: ಹಿಂದೂಯೇತರರು ಹಿಂದೂ ಧರ್ಮವನ್ನು ಪ್ರವೇಶಿಸಬೇಕಾದರೆ ವೀರಶೈವ ಸಿದ್ಧಾಂತವು ಅದಕ್ಕೆ ಪ್ರಮುಖ ಪ್ರವೇಶದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.  

ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ನಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಪುನುರುತ್ಥಾನ ಶೃಂಗಸಭೆಯಲ್ಲಿ ’ಶೈವ ಒಂದು ಜಾಗತಿಕ ಪ್ರಜ್ಞೆ’ ಕುರಿತು ವಿಚಾರ ಮಂಡಿಸಿದರು. ಹಿಂದೂ ಧರ್ಮವು ಹಲವಾರು ಸಿದ್ಧಾಂತ, ಸಂಪ್ರದಾಯಗಳ ಸಮೂಹಸಂಸ್ಕೃತಿಯಾಗಿದ್ದು, ಜನ್ಮದಿಂದಲೇ ಆಯಾ ಸಂಪ್ರದಾಯಗಳನ್ನು ಪ್ರವೇಶಿಸಲು ಅವಕಾಶವಿದೆ. ಆದರೆ ವೀರಶೈವ ಸಿದ್ಧಾಂತವು ಲಿಂಗದೀಕ್ಷೆ ಮೊದಲಾದ ಧರ್ಮ ಸಂಸ್ಕಾರಗಳನ್ನು ನೀಡುವಾಗ ಯಾವುದೇ ಭೇದವನ್ನು ನೋಡುವುದಿಲ್ಲ ಎಂದರು.  

ಜಗತ್ತಿನ ತತ್ವಜ್ಞಾನದ ತವರು ಎನಿಸಿಕೊಂಡಿರುವ ಗ್ರೀಸ್ ನೆಲದಲ್ಲಿ, ವಿಶ್ವಗುರು ಎನಿಸಿರುವ ಭಾರತೀಯ ತತ್ವಜ್ಞಾನದ ಕುರಿತು ಚಿಂತನ-ಮಂಥನ ನಡೆಸುತ್ತಿರುವುದು ಅಪರೂಪದ ಸಂದರ್ಭ. ಭೌಗೋಳಿಕವಾಗಿ ಗ್ರೀಕ್ ಮತ್ತು ಭಾರತ ಬಹಳ ದೂರದ ದೇಶಗಳಾದರೂ ತತ್ವಜ್ಞಾನದ ದೃಷ್ಟಿಯಿಂದ ಬಹಳಷ್ಟು ಹತ್ತಿರದಲ್ಲಿವೆ ಎಂದು ವಿವರಿಸಿದರು.  

ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ತಿರುಚಿ ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಅಕ್ಷರಧಾಮದ ಮಹಾಮಹೋಪಾಧ್ಯಾಯ ಭದ್ರೇಶನಾಥ ಸ್ವಾಮೀಜಿ, ಅಮೃತಸರದ ಸಹಜದೀಪ ಸಿಂಗ್‌ಠ ಮಹಾರಾಜ್, ಬೌದ್ಧ ಸಂಪ್ರದಾಯದ ಖೇಮಚಾರ ಬಿಕ್ಕುಜೀ ಮತ್ತಿತರರ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.  

ಆದಿಶಕ್ತಿ ಕುರಿತು ಸಿನಿಮಾ ನಿರ್ಮಾಣ  

ಶಿವನಿಂದ ಜೀವಿಗಳನ್ನು ಬೇರಿ​‍್ಡಸಿದ ಶಕ್ತಿಯೇ ಕೊನೆಗೆ ಅವರನ್ನು ಶಿವನೊಂದಿಗೆ ಸೇರಿಸುವುದೇ ಶಕ್ತಿವಿಶಿಷ್ಟಾದ್ವತ ಎನಿಸಿಕೊಂಡಿದ್ದು, ಅಧ್ಯಾತ್ಮದಲ್ಲಿ ಶಿವನಷ್ಟೇ ಶಕ್ತಿಗೂ ಪ್ರಾಧಾನ್ಯತೆ ಇದೆ. ಇಂತಹ ಆದಿಶಕ್ತಿಯ ಮಹಿಮೆಯನ್ನು ವಿಶ್ವದಾದ್ಯಂತ ಸಾರಲು ಗ್ರೀಸ್ ಸರ್ಕಾರ 100 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದು ಅಭಿನಂದನಾರ್ಹ ಎಂದು ಶ್ರೀಶೈಲ ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.