ಬಳ್ಳಾರಿ: ಎಸ್‌ಟಿಪಿ ಘಟಕ, ಮುಂಡರಿಗಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ- ಪರೀಶೀಲನೆ ನಡೆಸಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರ್ಪ
ಬಳ್ಳಾರಿ 17:ನಗರದ ಅನಂತಪುರ ರಸ್ತೆಯ 46 ಎಕರೆ ಪ್ರದೇಶದ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಮತ್ತು ಮುಂಡರಿಗಿ-2 ಹಂತ ಕೈಗಾರಿಕಾ ಪ್ರದೇಶಾಭಿವೃದ್ಧಿ ಕೇಂದ್ರಕ್ಕೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ ಅವರು ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಬಳಿಕ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನದ ಮೂಲಕ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪುನಃ ಉಪಯೋಗ ಮಾಡಿಕೊಳ್ಳುವುದರಿಂದ ಪಾಲಿಕೆಗೆ ಆದಾಯ ಬರಲಿದೆ. ತ್ಯಾಜ್ಯ ನೀರನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಅದರಿಂದ ಬಂದಂತಹ ಕೆಸರು ಮಣ್ಣನ್ನು ಕೃಷಿ ಚಟುವಟಿಕೆಗಳಿಗೆ ಯೋಗ್ಯವಾಗುವುದೇ ಎಂಬುದನ್ನು ಸಹ ಬಳಸಿ ಪರೀಶೀಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಪರಿಸರಕ್ಕೆ ಹಾನಿಯಾಗಬಾರದು ಎಂದು ಹೇಳಿದರು.ಕೈಗಾರಿಕಾ ತ್ಯಾಜ್ಯನೀರಿನ ಸಂಸ್ಕರಣೆಯು ಪ್ರತ್ಯೇಕ ಕೈಗಾರಿಕಾ ತ್ಯಾಜ್ಯನೀರಿನ ಸಂಸ್ಕರಣೆಯಲ್ಲಿ ಅಥವಾ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಮಾಡಬೇಕು. ಈ ಭಾಗದಲ್ಲಿ ಹೆಚ್ಚಾಗಿ ಸ್ಪಾಂಜ್ ಐರನ್ ಕೈಗಾರಿಕೆಗಳು ಇದ್ದು, ತ್ಯಾಜ್ಯ ನೀರು ಸಂಸ್ಕರಣೆಗೆ ಅವರೇ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಉಪಲೋಕಾಯುಕ್ತರು ನಿರ್ದೇಶನ ನೀಡಿದರು.ಮುಂಡರಿಗಿ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯದ ನೀರು ನಾಲೆಗೆ ಹರಿಯುವುದನ್ನು ಕಂಡ ಉಪಲೋಕಾಯುಕ್ತರು, ತ್ಯಾಜ್ಯ ನೀರು ಹರಿಸುವ ಕೈಗಾರಿಕೆಗಳಿಗೆ ನೋಟಿಸ್ ಜಾರಿ ಮಾಡಬೇಕು. ಅಂತಹ ಕೈಗಾರಿಕೆಗಳನ್ನು ಕೂಡಲೇ ಕಾರ್ಯ ನಿಲ್ಲಿಸುವಂತೆ ಆದೇಶ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೈಗಾರಿಕೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೇಲೆ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಜಿಲ್ಲೆಯಲ್ಲಿ ಪರಿಸರವಾದಿಗಳು ಇಲ್ಲದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಸಹಾಯಕ ನಿಬಂಧಕರಾದ ಶುಭವೀರ್ ಜೈನ್.ಬಿ., ಉಪ ನಿಬಂಧಕರಾದ ಅರವಿಂದ.ಎನ್.ವಿ., ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕ ಸಿದ್ಧರಾಜು.ಸಿ, ಡಿವೈಎಸ್ಪಿ ವಸಂತ ಕುಮಾರ್, ಜಿಲ್ಲಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸೋಮಶೇಖರ್, ತಹಶೀಲ್ದಾರ ಗುರುವಾರ, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.