ಬಳ್ಳಾರಿ: ಜನಗಣತಿ ಯಶಸ್ವಿಗೆ ಸನ್ನದ್ಧರಾಗಿ ಡಿಸಿ ನಕುಲ್ ಹೇಳಿಕೆ

ಲೋಕದರ್ಶನ ವರದಿ

ಬಳ್ಳಾರಿ 27:  ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಅತ್ಯಂತ ಮಹತ್ವವಾದುದು ಜನಗಣತಿ. ಈ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಚಾರ್ಜ  ಅಧಿಕಾರಿಗಳು ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸುವುದರ ಮೂಲಕ ಜನಗಣತಿ ಯಶಸ್ವಿಗೊಳಿಸಬೇಕು ಎಂದು ಪ್ರಧಾನ ಜನಗಣತಿ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೇಳಿದರು.

ಭಾರತ ಜನಗಣತಿ-2021ಕ್ಕೆ ಸಂಬಂಧಿಸಿದಂತೆ ನಗರದ ಮಹಾನಗರ ಪಾಲಿಕೆಯ ಶ್ರೀಕೃಷ್ಣದೇವರಾಯ ಸಭಾಂಗಣದಲ್ಲಿ ಗುರುವಾರ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ಪರಿಷ್ಕರಣೆ ಕುರಿತು ಜಿಲ್ಲಾ,ತಾಲೂಕು,ನಗರ ಮತ್ತು ಪಟ್ಟಣ ಜನಗಣತಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ 2ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದೇ ಏಪ್ರಿಲ್ 15ರಂದು ಜನಗಣತಿಯ ಪೂರ್ವಭಾವಿಯಾಗಿ ಮನೆಗಣತಿ ಕಾರ್ಯ,ಎನ್ಪಿಆರ್ ಮಾಹಿತಿ ದಾಖಲೀಕರಣ ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ಡಿಜಿಟಲ್ ಮಾದರಿಯಲ್ಲಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಣೆ ನಡೆಯಲಿದ್ದು,ಎಲ್ಲ ಚಾಜರ್್ ಅಧಿಕಾರಿಗಳು ಕೈಪಿಡಿ ಹಾಗೂ ಆ್ಯಪ್ಗಳ ಮಾಹಿತಿಯನ್ನು ಮತ್ತು ಜನಗಣತಿ ಕಾಯ್ದೆ-1948ರ ಕುರಿತು ಸಮರ್ಪಕವಾಗಿ ತಿಳಿದುಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಸ್ಪಷ್ಟತೆಯೊಂದಿಗೆ ಈ ಕಾರ್ಯಕೈಗೊಳ್ಳಬೇಕು ಎಂದು ಅವರು ಹೇಳಿದರು.

2021ರ ಜನಗಣತಿ ಪ್ರಕಟವಾದ ನಂತರ ಈ ಜನಗಣತಿಯನ್ನು ಆಧರಿಸಿಯೇ 2031ರವರೆಗೆ ದೇಶದಲ್ಲಿ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಜವಾಬ್ದಾರಿಯೊಂದರಲ್ಲಿ ಭಾಗಿಗಳಾಗಲಿರುವ ತಾವೆಲ್ಲರೂ ಅತ್ಯಂತ ಸ್ಪಷ್ಟತೆಯೊಂದಿಗೆ ಹಾಗೂ ಜವಾಬ್ದಾರಿಯುತವಾಗಿ ಈ ಕಾರ್ಯಕೈಗೊಳ್ಳಬೇಕು ಎಂದರು.

ಈ ಜನಗಣತಿ ಪ್ರಕ್ರಿಯೆ ಸಂದರ್ಭದಲ್ಲಿ ಗಣತಿದಾರರು ಸ್ಥಳಕ್ಕೆ ತೆರಳಿ ಸರಿಯಾದ ಮಾಹಿತಿಯನ್ನು ಸಂಗ್ರಹಿಸಬೇಕು;

ಅದನ್ನು ಬಿಟ್ಟು ಎಲ್ಲಿಯೋ ಕುಳಿತು ಅರೆಬರೇ ಮಾಹಿತಿಯನ್ನು ಸಂಗ್ರಹಿಸಿ ದಾಖಲಿಸಿರುವುದು ಕಂಡುಬಂದಲ್ಲಿ ಅಂತವರ ಮೇಲೆ ಕಠಿಣಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಎಚ್ಚರಿಸಿದರು.

ಜನಗಣತಿ ಕಚೇರಿಯಿಂದ ಆಗಮಿಸಿದ್ದ ಸಂಪನ್ಮೂಲ ಅಧಿಕಾರಿ ರಾಮಾಂಜನಿ ಅವರು ತರಬೇತಿ ನೀಡಿದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ್ ಶಿವಾಚಾರ್ಯ ಸ್ವಾಗತಿಸಿ ಜನಗಣತಿಯ ಉದ್ದೇಶದ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ, ಹೊಸಪೇಟೆ ಉಪವಿಭಾಗಾಧಿಕಾರಿ ಶೇಖ್ ತನ್ವೀರ್ ಅಸೀಫ್, ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು ಹಾಗೂ 38 ಚಾರ್ಜ ಅಧಿಕಾರಿಗಳು ಇದ್ದರು.