ಲೋಕದರ್ಶನ ವರದಿ
ಬಳ್ಳಾರಿ 20: ಗಣಿಗಾರಿಕೆಯಿಂದ ವಿವಿಧ ಸಮಸ್ಯೆಗಳಿಂದ ನರಳುತ್ತಿರುವ ಕಮತೂರು ಗ್ರಾಮ(ದೇವಗಿರಿಹಳ್ಳಿ)ಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ನಿರ್ದೇಶನದ ಮೇರೆಗೆ ಸಂಡೂರು ತಾಪಂ ಇಒ ಮತ್ತು ತಾಲೂಕು ವೈದ್ಯಾಧಿಕಾರಿ ನೇತೃತ್ವದ ತಂಡ ಕಮತೂರಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂರ್ನಾಲ್ಕು ದಿನಗಳಲ್ಲಿ ಆ ಗ್ರಾಮದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಜಿಪಂ ಸಿಇಒ ಕೆ.ನಿತೀಶ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಂದ ಪ್ರತಿಯೊಂದು ಮನೆಯನ್ನು ಸಮೀಕ್ಷೆ ಮಾಡಿ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಲಾಗುವುದು. ಅಲ್ಲಿನ ನೀರಿನ ಪರೀಕ್ಷೆ ಮಾಡಲು ಸ್ಯಾಂಪಲ್ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ತಾಪಂ ಇಒ ಅನ್ನದಾನಸ್ವಾಮಿ, ತಾಲೂಕಿನ ವೈದ್ಯಾಧಿಕಾರಿಗಳಾದ ಕಿರಣ, ಚಂದ್ರಪ್ಪ ಮತ್ತು ಸಿಬ್ಬಂದಿ, ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿ ಮೂರು ಜನ ಮಾತ್ರ ಕ್ಷಯ ಕಾಯಿಲೆಯಿಂದ ಬಳಲುತ್ತಿದ್ದು, ಉಳಿದವರ ಮನೆಗಳಲ್ಲಿ ಜನರು ಆರೋಗ್ಯವಾಗಿದ್ದಾರೆ.
ಕೃಷಿ ಭೂಮಿ ಇಲ್ಲವಾಗಿದ್ದು, ಗ್ರಾಮದ ಸುತ್ತಮುತ್ತ ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಮತ್ತು ಲಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡುತ್ತಿರುವುದರಿಂದ ಧೂಳು ಜಾಸ್ತಿಯಾಗಿದೆ ಮತ್ತು ಟ್ರಾಫಿಕ್ ಸಮಸ್ಯೆಯೂ ಜಾಸ್ತಿ ಇದೆ. ಇದರಿಂದಾಗಿ ಕೈ-ಕಾಲುಗಳಲ್ಲಿ ಜಾಯಿಂಟ್ ಪೇನ್ ಬರುತ್ತದೆ ಎಂದು ಭೇಟಿ ನೀಡಿದ ತಾಪಂ ಇಒ ನೇತೃತ್ವದ ತಂಡಕ್ಕೆ ಪೊನ್ನಪ್ಪ ಎಂಬುವರು ವಿವರಿಸಿದ್ದಾರೆ.
ಕಮತೂರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.