ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಬೆಳಗಾವಿ ಯೋಧ ಹುತಾತ್ಮ

ಬೆಳಗಾವಿ, ನ.8:    ನಾಲ್ಕು ವರ್ಷಗಳ ಹಿಂದೆ ಭಾರತೀಯ ಸೈನ್ಯ ಸೇರಿದ್ದ ಬೆಳಗಾವಿಯ ಯೋಧ ರಾಹುಲ ಸುಳಗೇಕರ (22) ಹುತಾತ್ಮನಾಗಿದ್ದಾರೆ. ಬೆಳಗಾವಿ ತಾಲೂಕಿನ ಉಚಗಾವ ಗ್ರಾಮದ ಈ ವೀರ ಯೋಧ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ   ಹೋರಾಡಿ ವೀರಮರಣವನ್ನಪ್ಪಿದ್ದಾರೆ. ರಾಹುಲ್ ರಜೆಯ ಮೇಲೆ ಗಣೇಶ ಉತ್ಸವ ವೇಳೆ ತವರಿಗೆ ಬಂದು ಕರ್ತವ್ಯಕ್ಕೆ ಹಿಂದಿರುಗಿದ್ದರು. ಜಮ್ಮುವಿನ ಪುಂಚ್ ಬಳಿ ಭಯೋತ್ಪಾದಕರೊಂದಿಗೆ ಸೆಣಸಾಡುವಾಗ ಗುಂಡು ತಗುಲಿ ಹುತಾತ್ಮನಾಗಿದ್ದಾರೆ. ರಾಹುಲ್ ಅಣ್ಣ ಮಯೂರ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಹುಲ್ ಅವರ ತಂದೆ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತನ್ನ ಇಬ್ಬರೂ ಮಕ್ಕಳನ್ನೂ ಸೇನೆಗೆ ಸೇರಿಸಿ ತಂದೆ ಭೈರು ಸುಳಗೇಕರ ದೇಶಾಭಿಮಾನ ಮೆರೆದಿದ್ದಾರೆ. ಉಚಗಾವಗೆ ಶುಕ್ರವಾರ ಸಂಜೆ  ಯೋಧನ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆ ಇದ್ದು, ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.