ಚಟುವಟಿಕೆ ಕೇಂದ್ರವಾಗುತ್ತಿದೆ ಡಿಕೆಶಿ ನಿವಾಸ : ನಡೆಯುತ್ತಿದೆಯೇ ರಾಜಕೀಯ ತಂತ್ರಗಾರಿಕೆ?!

ಬೆಂಗಳೂರು,ಜ 12:       ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಿವಾಸ ಮತ್ತೊಮ್ಮೆ ಚಟುವಟಿಕೆಯ ಕೇಂದ್ರವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷಗಾದಿಗೇರುವ ಪ್ರಮುಖರಾಗುತ್ತಿದ್ದಂತೆಯೇ  ಸಾಕಷ್ಟು ಕಾಂಗ್ರೆಸ್ ನಾಯಕರ ಸ್ಪರ್ಧೆಯ ನಡುವೆಯೂ ತಮ್ಮ ಹೆಸರನ್ನು ಮುಂಚೂಣಿಯಲ್ಲಿ ಉಳಿಸಿಕೊಂಡಿದ್ದಾರೆ. ಹೈಕಮಾಂಡ್ ನಾಯಕರಿಗೆ ಹತ್ತಿರವಾಗಿರುವ ಇವರು, ಇದೀಗ ಕೆಪಿಸಿಸಿ ಅಧ್ಯಕ್ಷಗಾದಿಯೇರುವ ನಾಯಕರಲ್ಲಿ ಅಗ್ರಪಂಥಿಯಲ್ಲಿದ್ದಾರೆ. 

ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ವಿವಿಧ ನಾಯಕರು ಕೂಡ ಇವರ ಭೇಟಿಗೆ ಆಗಮಿಸುತ್ತಿದ್ದಾರೆ.ಕಳೆದ ಒಂದು ವಾರದಿಂ ದ ಹಲವು ನಾಯಕರು ಇವರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ. ನಿನ್ನೆ ಕನಕಪುರಕ್ಕೆ ತೆರಳುವ ಮುನ್ನ ಹಾಗೂ ವಾಪಾಸಾದ ನಂತರ ತಮ್ಮ ಸದಾಶಿವನಗರ ನಿವಾಸದಲ್ಲಿ ಡಿಕೆಶಿ ಕೆಲ ನಾಯಕರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ.   

ಬೆಳಗ್ಗೆ ಕನಕಪುರಕ್ಕೆ ತೆರಳುವ ಮುನ್ನ ಮಾಜಿ ಸಚಿವ ಹಾಗೂ ದುಷ್ಕರ್ಮಿಯಿಂದ ಹಲ್ಲೆಗೆ ಒಳಗಾಗಿ ಚೇತರಿಸಿ  

ಕೊಂಡಿರುವ ಮಾಜಿ ಸಚಿವ ತನ್ವೀರ್ ಸೇಠ್ ಅವರು ಸದಾಶಿವನಗರ ನಿವಾಸದಲ್ಲಿ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು. ವಿಶ್ರಾಂತಿ ಹಾಗೂ ಆರೋಗ್ಯ ಪಾಲನೆಗೆ ಹೆಚ್ಚು ಒತ್ತು ನೀಡುವಂತೆ ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಸಂಜೆ  ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಶನಿವಾರ  ಮಾಜಿ ಸಚಿವ ಚೆಲುವರಾಯ ಸ್ವಾಮಿ ಭೇಟಿ ನೀಡಿದರು. ಸುದೀರ್ಘ ಸಮಾಲೋಚನೆ ನಡೆಸಿ ಇವರು ತೆರಳಿದ್ದಾರೆ. 

ಒಟ್ಟಾರೆ ದಿನದಿಂದ ದಿನಕ್ಕೆ ಡಿಕೆಶಿ ನಿವಾಸಕ್ಕೆ ಕಾಂಗ್ರೆಸ್ ನಾಯಕರು ಭೇಟಿ ಕೊಡುವ ಪ್ರಮಾಣ ಹೆಚ್ಚಾಗುತ್ತಿದೆ. ಹಿಂದೆ ಕೂಡ ಕೆಲ ನಾಯಕರು ಭೇಟಿ ಕೊಟ್ಟಿದ್ದರಾದರೂ, ಆಗ ಕೇವಲ ಅವರ ಆರೋಗ್ಯ ವಿಚಾರಿಸಿ ತೆರಳಿದ್ದರು. ಆದರೆ ಇದೀಗ ರಾಜಕೀಯ ತಂತ್ರಗಾರಿಕೆ ಹೆಣೆಯುವ ಮಾತುಕತೆಗಾಗಿ ನಾಯಕರು ಇತ್ತ ಮುಖಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.