ಗಜೇಂದ್ರಗಡ 16: ರಾಜ್ಯ ಮಟ್ಟದ ಈ ಯುವ ಜನ ಮೇಳ ಕಲಾವಿದರಿಗೆ ಉತ್ತಮ ವೇದಿಕಾಯಾಗಿದ್ದು ಈ ವೇದಿಕೆ ಮೂಲಕ ಯುವಜನತೆ ರಾಷ್ಟ್ರಮಟ್ಟದಲ್ಲೂ ಉತ್ತಮ ಹೆಸರು ಗಳಿಸುವಂತಾಗಲಿ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ಗಜೇಂದ್ರಗಡದ ಎ.ಪಿ.ಎಂ.ಸಿ.ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಯುವಜನಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸ ಅವರು ಮಾತನಾಡಿದರು. ಗ್ರಾಮಗಳ ಕಲೆಗಳು ಬೆಳೆಯಲು, ಪ್ರೋತ್ಸಾಹಿಸುವ ಇಂತಹ ವೇದಿಕೆಗಳನ್ನು ಬಳಸಿಕೊಂಡು ಜಾನಪದ ಕಲೆ ಉಳಿಸುವ ಕಾರ್ಯ ಮಾಡುವಂತೆ ಯುವಕರಿಗೆ ಕರೇ ನೀಡಿದರು. ಮುಂದಿನ ಪಿಳೀಗೆಗೆ ಕೊಂಡೊಯ್ಯುವ ಗುರುತರ ಜವಾಬ್ದಾರಿ ಇಂದಿನ ಯುವಜನತೆಯಲ್ಲಿದ್ದು ಜಾನಪದ ಕಲೆ ಸಂಸ್ಕೃತಿಗಳ ರಕ್ಷಣೆ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ಶಾಸಕರಾದ ಕಳಕಪ್ಪ ಬಂಡಿ ಅವರು ಮಾತನಾಡಿ ಕಳೇದ ಮೂರು ದಿನಗಳಿಂದ ಜರುಗಿದ ಈ ಯುವಜನಮೇಳ ಯಶಸ್ವಿಯಾಗಿ ಜರುಗಿದ್ದು ಸಂತಸದ ಸಂಗತಿಯಾಗಿದೆ ಎಂದು ನುಡಿದರು. ಕಲಾವಿದರು ತಾವು ಎದುರಿಸುತ್ತಿರುವ ತೊಂದರೆಗಳಿಗೆ ಅಹವಾಲುಗಳಿಗೆ ಶೀಘ್ರವೇ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮದ ಯಶಸ್ವಿಗಾಗಿ ಸಹಕಾರ ನೀಡಿದ ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಶಾಸಕ ಕಳಕಪ್ಪ ಬಂಡಿ ಅಭಿನಂದನೆ ಸಲ್ಲಿಸಿದರು.ಗದಗ ಉಪವಿಭಾಗಧಿಕಾರಿ ರಾಯಪ್ಪ ಹುಣಸಗಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ.ವಿಶ್ವನಾಥ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯುವಜನ ಮೇಳಕ್ಕೆ ಆಗಮಿಸಿದ ಕಲಾವಿದರು ತಮ್ಮ ಅನಸಿಕೆಗಳನ್ನು ಹಂಚಿಕೊಂಡರು. ಬೆಂಗಳೂರು ವಿಭಾಗದ ಮಹೇಶಕುಮಾರ ಡಿ ಕಳೆದ ಮೂರುದಿನಗಳಿಂದ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದ್ದು ಪರ ಊರಿನಿಂದ ಬಂದಂತಹ ನಮ್ಮನ್ನು ಮನೆ ಮಕ್ಕಳಂತೆ ಗೌರವ ನೀಡಿದ್ದಾರೆ. ಅಲ್ಲದೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು ಎಂದು ತಮ್ಮ ಅನಸಿಕೆ ಹಂಚಿಕೊಂಡ ಅವರು ಪೋಲಿಸ ಇಲಾಖೆಗೆ ಧನ್ಯವಾದ ತಿಳಿಸಿದರು.
ಕಲಬುರ್ಗಿಯ ಪ್ರಸನ್ನರಾಜಕುಮಾರಿ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ತುಂಬಾ ಸಂತಸದ ವಿಷಯವಾಗಿದ್ದು ಜೊತೆಗೆ ಯುವಕ ಯುವತಿಯರಿಗೆ ಪ್ರತ್ಯೇಕ ವಸತಿಸೌಲಭ್ಯ ಒದಗಿಸುವದರ ಜೊತೆಗೆ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚು ಜರುಗವಂತಾಗಬೇಕು ಎಂದರು. ಬೆಳಗಾವಿ ವಿಭಾಗದ ಅಜರುದ್ದೀನ ಮಾತನಾಡಿ ಸ್ಥಳೀಯ ಶಾಸಕರು ಹಾಗೂ ಗಜೇಂದ್ರಗಡದ ಜನತೆ ತುಂಬಾ ಸಹಕಾರ ನೀಡಿದ್ದು ಮರೆಯಲಾಗದಂತಹ ಸಂಗತಿಯಾಗಿದೆ ಎಂದರು.