ಪರೀಕ್ಷೆ ಭಯಬೇಡ ಸಿದ್ಧತೆಯಿರಲಿ: ಜಿಪಂ ಅಧ್ಯಕ್ಷ ಪಾಟೀಲ್

ಗದಗ ನರಗುಂದ 06: ತಾಲ್ಲೂಕಿನ ಪ್ರಾಥಮಿಕ, ಪ್ರೌಢಶಾಲೆ, ವಸತಿ ಶಾಲೆಗಳು, ಬೆನಕನಕೊಪ್ಪನ ಗ್ರಾಮದಲ್ಲಿರುವ ಮೊರಾರ್ಜಿ  ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಧಲಿಂಗೇಶ್ವರ ಎಚ್.ಪಾಟೀಲ್  ಪರಿಶೀಲಿಸಿದರು. ನರಗುಂದ ಪಟ್ಟಣದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯದ ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿಕ್ಕನರಗುಂದ ಗ್ರಾಮದ ಸರ್ಕಾರಿ  ಪ್ರೌಢಶಾಲೆಗೆ ಭೇಟಿ ಕೊಟ್ಟ ಅವರು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ಸಂವಾದ ನಡೆಸಿದ ಬಳಿಕ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು.

ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯ ಬಗ್ಗೆ ಭಯಭೀತರಾಗದೇ, ಧೈರ್ಯದಿಂದ ಎದುರಿಸಬೇಕು. ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದು, ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಪಡೆದು, ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ  ತರಬೇಕು ಎಂದು ಸಿದ್ಧಲಿಂಗೇಶ್ವರ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಇದೇ ವೇಳೆ,  ಶಿರೋಳದ ಪ್ರಾಥಮಿಕ ಆರೋಗ್ಯ ಕೇಂದ್ರ, ಅರಣ್ಯ ಇಲಾಖೆಯಿಂದ ಅಭಿವೃದ್ಧಿಗೊಂಡ ಕೆರೆ ಹಾಗೂ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯ ಸಹಯೋಗದಲ್ಲಿ ನಿರ್ಮಾಣವಾದ ರೈತರ ಸಾಮೂಹಿಕ ಕೆರೆ, ಪ್ಯಾಕ ಹೌಸ್ ಮತ್ತು ತೋಟಗಳಿಗೆ ಭೇಟಿ ನೀಡಿದರು.  

ಜಿಲ್ಲಾ ಪಂಚಾಯತ ಸದಸ್ಯ ರಾಜೂಗೌಡ  ಕೆಂಚನಗೌಡ್ರ, ನರಗುಂದ ತಾಪಂ ಅಧ್ಯಕ್ಷೆ ರೇಣುಕಾ ಎಸ್. ಅವರಾದಿ, ತಾಪಂ ಸದಸ್ಯ ವಿಠ್ಠಲ ತಿಮ್ಮರಡ್ಡಿ ಹಾಗೂ ಇತರರು ಜೊತೆಗಿದ್ದರು.