ಬಸವನಬಾಗೇವಾಡಿ: ಇಂದಿನಿಂದ ವಿಚಾರ ಸಂಕಿರಣ

ಲೋಕದರ್ಶನ ವರದಿ

ಬಸವನಬಾಗೇವಾಡಿ 23: ಪಟ್ಟಣದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ 24 ಹಾಗೂ 25 ರಂದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪ್ರತ್ಯೇಕವಾಗಿ ವರ್ತಮಾನದಲ್ಲಿ ಭಕ್ತಿಮಾರ್ಗಗಳ ಪ್ರಸ್ತುತತೆ ಎಂಬ ವಿಷಯ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಬಿಎಲ್ಡಿಇ ಸಂಸ್ಥೆ ಪ್ರಾಚಾರ್ಯ ಡಾ.ಎಸ್.ಟಿ.ಮೇರವಾಡೆ ತಿಳಿಸಿದರು. 

ಸ್ಥಳೀಯ ಬಿಎಲ್ಡಿಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಐಕ್ಯೂಎಸಿ, ಹಿಂದಿ ಮತ್ತು ಕನ್ನಡ ವಿಭಾಗ ಹಾಗೂ ವಿಜಯಪುರದ ದಿ.ಬಾಬುರಾವ್ ಶೆಟ್ಟಿ ಟ್ರಸ್ಟ್ ಸಹಯೋಗದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಈ ಗೋಷ್ಠಿಗಳಲ್ಲಿ ಜೈನ, ವೈದಿಕ, ವೀರಶೈವ ಹಾಗೂ ಅಲಕ್ಷಿತ ವಚನಗಾತರ್ಿಯರ ವಚನಗಳಲ್ಲಿ ಹಾಗೂ ಆಧುನಿಕ ಸಾಹಿತ್ಯದಲ್ಲಿ ಭಕ್ತಿಯ ಪ್ರಸ್ತುತತೆ ಕುರಿತು ಪ್ರಾಧ್ಯಾಪಕ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ 500 ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮೇರವಾಡಿ ಹೇಳಿದರು. 

ಫೆ.24 ರಂದು ನಡೆಯಲಿರುವ ಉದ್ಘಾಟನೆ ಸಮಾರಂಭದಲ್ಲಿ ಬೆಲ್ಜಿಯಂ ಗೆಂಟ್ ವಿವಿಯ ವಿಜಿಟಿಂಗ್ ಪ್ರೊಸರ್ ಡಾ.ರಮೇಶ ಚಂದ್ರ ಶರ್ಮಾ, ನೇಪಾಳದ ಹಿರಿಯ ಸಾಹಿತಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ವಿಷ್ಣು ಕೋಮಲ, ಡಾ.ಕೆ.ಜಿ ಪೂಜಾರಿ ಆಗಮಿಸಲಿದ್ದಾರೆ. ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಪ್ರೊ.ರಾಜು ಆಲಗೂರ ಉದ್ಘಾಟಿಸುವರು. ವಿಜಯಪುರದ ಬಿಎಲ್ಡಿಇ ಸಂಸ್ಥೆ ಆಡಳಿತಾಧಿಕಾರಿ ಪ್ರೊ. ಎಸ್.ಎಚ್.ಲಗಳಿ ಅಧ್ಯಕ್ಷತೆ ವಹಿಸುವರು, ವಿಜಯಪುರ ಬಾಬುರಾವ ಶೆಟ್ಟಿ ಟ್ರಸ್ಟ್ ಅಧ್ಯಕ್ಷ ನಾಗೇಶ ಶೆಟ್ಟಿ ಗ್ರಂಥ ಬಿಡುಗಡೆಗೊಳಿಸುವರು. ಡಾ.ರಮೇಶಚಂದ್ರ ಶರ್ಮಾ  ಹಿಂದಿಯಲ್ಲಿ ಹಾಗೂ ಡಾ.ವಿ.ಎಸ್.ಮಾಳಿ ಕನ್ನಡದಲ್ಲಿ ಆಶಯ ಭಾಷಣ ಮಂಡಿಸುವರು ಎಂದು ಹೇಳಿದರು. 

ಮಧ್ಯಾಹ್ನ 12.15 ರಿಂದ 2 ಗಂಟೆವರೆಗೆ 'ಜೈನ ಸಾಹಿತ್ಯದಲ್ಲಿ ಭಕ್ತಿಯ ಪ್ರಸ್ತುತತೆ' ಕುರಿತು 1ನೇ ಗೋಷ್ಠಿ ನಡೆಯಲಿದೆ. ಪ್ರೊ.ಎಂ.ಎಸ್. ಮದಭಾವಿ ಅಧ್ಯಕ್ಷತೆ ವಹಿಸುವರು. ಧಾರವಾಡ ಜೆಎಸ್ಎಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿನದತ್ತ ಹಡಗಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸುವರು ಎಂದರು. 

ಫೆ.25 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗೋಕಾಕದ ಜೆ.ಎಸ್.ಎಸ್. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಸ್. ತೇರದಾಳ ಹಾಗೂ ಧಾರವಾಡದ ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಆರ್ವಿ.ಪಾಟೀಲ ಆಗಮಿಸಲಿದ್ದಾರೆ ಎಂದವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಡಾ.ತಮ್ಮಣ್ಣ ವೈ, ಡಾ.ಶ್ರೀನಿವಾಸ ದೊಡ್ಡಮನಿ, ಡಾ. ಬಸವರಾಜ ಸಾಲವಾಡಗಿ, ಪ್ರೊ.ಸಂತೋಷ ಸೂರಗೊಂಡ, ಪ್ರೊ.ಬಿ.ಬಿ. ಡೆಂಗನವರ, ಪ್ರೊ.ಅರುಣ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.