ನವದೆಹಲಿ, ನ.27- ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ)ಯಡಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಂತಿ ಕುಮಾರ್ ಚೋರ್ಡಿಯಾ, ಉಮರಾವ್ ಮಾಲ್ ಚೋರ್ಡಿಯಾ ಮತ್ತು ನಯನತಾರ ಚೋರ್ಡಿಯಾ ಅವರಿಗೆ ಸೇರಿದ 5.11 ಕೋಟಿ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಜೈಪುರದ ಮೂರು ವಸತಿ ಮತ್ತು ಬಿಸಿನೆಸ್ ಮನೆಗಳು, ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ ಫ್ಲಾಟ್ ಮತ್ತು ಜೈಪುರದ ಎಸ್‌ಬಿಐನಲ್ಲಿ 1.31 ಕೋಟಿ ರೂ.ಗಳ ನಿಶ್ಚಿತ ಠೇವಣಿ ಸೇರಿದಂತೆ 3.80 ಕೋಟಿ ಮೌಲ್ಯದ ನಾಲ್ಕು ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ.
ಶಾಂತಿ ಕುಮಾರ್ ಚೋರ್ಡಿಯಾ, ಉಮರಾವ್ ಮಾಲ್ ಚೋರ್ಡಿಯಾ, ವಿಪುಲ್ ಜೆಮ್ಸ್ ಪ್ರೈವೇಟ್ ಲಿಮಿಟೆಡ್ ಜೈಪುರ, ಕೆವಿ ಎಕ್ಸ್‌ಪೋರ್ಟ್ಸ್, ಜೈಪುರ ಮತ್ತು ವಿಪುಲ್ ವಿರುದ್ಧ ಮುಂಬೈಯ ಸಿಬಿಐ ಎಫ್‌ಐಆರ್ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಜೈಪುರದ ಜಾರಿ ನಿರ್ದೇಶನಾಲಯ ಈ ಕ್ರಮಕೈಗೊಂಡಿದೆ.
ಈ ಸಂಸ್ಥೆಗಳು ಬ್ಯಾಂಕಿಗೆ ಮೋಸ ಮಾಡಿವೆ ಮತ್ತು ಅಪರಾಧದ ಉದ್ದೇಶದಿಂದ ಅಪ್ರಾಮಾಣಿಕವಾಗಿ ಮತ್ತು ಮೋಸದಿಂದ ಬ್ಯಾಂಕ್ ಸಾಲದ ಮೊತ್ತವನ್ನು ವಸೂಲಿ ಮಾಡುವುದಕ್ಕೆ ತಡೆ ಒಡ್ಡಿದೆ. ಹೀಗಾಗಿ ಬ್ಯಾಂಕ್‌ಗೆ 30 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಪುಲ್ ಜೆಮ್ಸ್ ಪ್ರೈವೇಟ್ ಲಿಮಿಟೆಡ್, ವಿಪುಲ್ ಜೆಮ್ಸ್ ಮತ್ತು ಕೆ.ವಿ. ಎಕ್ಸ್‌ಪೋರ್ಟ್ ಸಂಸ್ಥೆಗಳು ಬೆಲೆಬಾಳುವ ಕಲ್ಲುಗಳನ್ನು ರಫ್ತು ಮಾಡುವ ಕಂಪನಿಗಳಾಗಿವೆ