ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್

ravishanker prasad

ಬೆಂಗಳೂರು, ಜ 18 :  ಬೆಂಗಳೂರು ನಗರ ನವೋದ್ಯಮಗಳ ಸ್ಥಾಪನೆಗೆ ದೇಶದಲ್ಲಿಯೇ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ದೇಶದ ರಾಜಧಾನಿಯಾಗಿ ಹೊರ ಹೊಮ್ಮಿದೆ. ಇಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ, ಉತ್ತುಂಗದಲ್ಲಿರುವ ಮಾಹಿತಿ ತಂತ್ರಜ್ಞಾನ ನವೋದ್ಯಮಿಗಳಿಗೆ ಆಧಾರವಾಗಿದೆ ಎಂದು ಕೇಂದ್ರ ವಿದ್ಯುನ್ಮಾನ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಟೆಕ್ ಭಾರತ್ -2020 ನವೋದ್ಯಮಗಳೊಂದಿಗೆ ದೆಹಲಿಯಿಂದ ವಿಡಿಯೋ ಸಂವಾದ ನಡೆಸಿದ  ರವಿಶಂಕರ್ ಪ್ರಸಾದ್, ಭಾರತದಲ್ಲಿ‌ ಮೊದಲು ಎರಡೇ ಮೊಬೈಲ್ ತಯಾರಿಕಾ ಕಾರ್ಖಾನೆಗಳಿದ್ದವು. ಆದರೆ ಈಗ ಡಿಜಿಟಲ್ ತಂತ್ರಜ್ಞಾನದಿಂದಾಗಿ  268 ಮೊಬೈಲ್ ಕಾರ್ಖಾನೆಗಳು ಆರಂಭವಾಗಿವೆ. ಭಾರತ ವಿಶ್ವದಲ್ಲಿ ಮೊಬೈಲ್ ತಯಾರಿಕೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಔಷಧ ತಯಾರಿಕಾ ಕಾರ್ಖಾನೆಗಳು ಸಹ ಹೆಚ್ಚುತ್ತಿವೆ ಎಂದರು.

ನಾವು ಕೆಲಸ‌ಕೊಡುವವರೇ‌ ಹೊರತು ಕೆಲಸ ಕಸಿಯುವವರಲ್ಲ. ವಿಶ್ವದಲ್ಲಿ ಭಾರತ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಮೊಬೈಲ್ ತಯಾರಿಕಾ ಕೇಂದ್ರವಾಗಿ ಭಾರತ ಮಂಚೂಣಿಗೆ ಬಂಇದೆ. 9 ಸಾವಿರ ಸ್ಟಾರ್ಟಪ್‌ ಗಳು ಇದ್ದು, ಹೆಚ್ಚಿನ ಉದ್ಯೋಗ ದೊರೆತಿದೆ. ಸ್ಟಾರ್ಟಪ್ ಮೂಲಕ 25 ದಶಲಕ್ಷ ಡಾಲರ್ ವಹಿವಾಟು ನಡೆಯುತ್ತಿದೆ ಎಂದರು.

ಡಿಜಿಟಲ್‌ ಇಂಡಿಯಾ ಎಂಬುದು ಈಗ ಮೇಕ್ ಇನ್ ಇಂಡಿಯಾ ಆಗಿದೆ. ಬರುವ 2022ರಲ್ಲಿ ರಾಷ್ಟ್ರೀಯ ಬ್ರಾಡ್ ಬ್ಯಾಂಡ್ ವಿಸ್ತಾರವಾಗಲಿದೆ. ಭೀಮ್ ಯುಪಿಐ ಆಪ್ ನಲ್ಲಿ 2016ರಲ್ಲಿ ಪ್ರತಿದಿನ 4ಸಾವಿರ ರೂ ನಷ್ಟಿದ್ದ ಹಣಕಾಸು ವಿನಿಮಯ 2019 ಕ್ಕೆ 4.22 ಕೋಟಿ ಆಗಿದೆ. ಕೃಷಿ ಪಶುಸಂಗೋಪನೆ ಶಿಕ್ಷಣ ಆರೋಗ್ಯ ಎಲ್ಲಾ ಕ್ಷೇತ್ರಗಳಲ್ಲಿಯೂ ತಂತ್ರಜ್ಞಾನ ಸ್ಪಷ್ಟ ಮತ್ತು ಸಮರ್ಪಕವಾಗಿದೆ. ಇಡೀ ವಿಶ್ವವೇ ಭಾರತವನ್ನು ಗಮನಿಸುತ್ತಿದೆ. ಭಾರತ ಡಿಜೀಟಲೀಕರಣ ಆಗುವುದನ್ನು ನಿರೀಕ್ಷಿಸುತ್ತಿದೆ ಎಂದರು. 

ಡಿಜಿಟಲ್ ಇಂಡಿಯಾ ಎನ್ನುವುದು ಒಂದು ಮಹಾನ್ ಯಜ್ಞವಾಗಿದ್ದು, ಬೆಂಗಳೂರಿನವರು ಹೆಚ್ಚೆಚ್ಚು‌ ಸ್ಟಾರ್ಟ್‌ಅಪ್‌ಗೆ‌  ಪ್ರೋತ್ಸಾಹಿಸಬೇಕು. ಪ್ರಧಾನಿ ಮೋದಿ ಅವರಿಗೆ ತಂತ್ರಜ್ಞಾನ ವಲಯದಿಂದ 5 ಟ್ರಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಯಬೇಕೆಂಬ ನಿರೀಕ್ಷೆ ಹೊಂದಿದ್ದಾರೆ. ಇದರಲ್ಲಿ ಒಂದು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆ ವ್ಯಾಪ್ತಿಗೆ ಬರುವ ನಿರೀಕ್ಷೆಯಿದೆ ಎಂದರು.