ಪಂ. ಕಾಲೀನಾಥ ಮಿಶ್ರಾ ಅವರಿಗೆ ಬಾಲೇಖಾನ ಸಹಕಲಾವಿದ ಪ್ರಶಸ್ತಿ

Balekhana Associate Artist Award to Pt. Kalinath Mishra

ಧಾರವಾಡ 06: ಸಿತಾರ ನವಾಜಸಿ ಉ. ಬಾಲೇಖಾನ ಸ್ಮರಣಾರ್ಥ ಪ್ರದಾನಿಸುವ ಸಹಕಲಾವಿದ ಪ್ರಶಸ್ತಿಗೆ ಮುಂಬೈನ ಖ್ಯಾತ ತಬಲಾ ಕಲಾವಿದ ಪಂ. ಕಾಲೀನಾಥ ಮಿಶ್ರಾ ಆಯ್ಕೆಯಾಗಿದ್ದಾರೆ. 

ಬನಾರಸ ಘರಾಣೆಯ ಪಂ. ಕಾಲೀನಾಥ ಮಿಶ್ರಾ ಅವರು ಮುಂಚೂಣಿಯಲ್ಲಿರುವ ದೇಶದ ಸುವಿಖ್ಯಾತ ತಬಲಾ ಕಲಾವಿದರಾಗಿದ್ದಾರೆ. ಪಂ. ಮದನ ಮಿಶ್ರಾ ಅವರಿಂದ ಆರಂಭಿಕ ಹಂತದ ತಬಲಾ ಶಿಕ್ಷಣ ಪಡೆದ ಅವರು ಮುಂದಿನ ದಿನಗಳಲ್ಲಿ ಪಂ. ಕಿಶನ್ ಮಹಾರಾಜ್ ಅವರಿಂದ ಆಳವಾದ ಅಧ್ಯಯನ ಮಾಡಿ ಪ್ರಬುದ್ಧ ತಬಲಾವಾದಕರಾಗಿ ಹೊರಹೊಮ್ಮಿದ್ದಾರೆ. ದೇಶ ಖ್ಯಾತನಾಮ ಕಲಾವಿದರಿಗೆ ಸಾಥ್ ಸಂಗತ್ ಮಾಡಿರುವ ಕಾಲೀನಾಥ ಮಿಶ್ರಾ ಆಕಾಶವಾಣಿಯ ಎ ಶ್ರೇಣಿಯ ಕಲಾವಿದರಾಗಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನ ಸಿತಾರ ನವಾಜು್ ಉ. ಬಾಲೇಖಾನ್ ಮೆಮೋರಿಯಲ್ ಟ್ರಸ್ಟ್‌ ಈ ವರ್ಷದ ಸಹಕಲಾವಿದ ಪ್ರಶಸ್ತಿಯನ್ನು ಪಂ. ಕಾಲೀನಾಥ ಮಿಶ್ರಾ ಅವರಿಗೆ ಪ್ರದಾನಿಸುತ್ತಿದೆ.  

ಡಿ. 07 ರಂದು ಸಂಜೆ 5 ಗಂಟೆಗೆ ಸೃಜನಾ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಿತಾರ ರತ್ನ ಸಮಿತಿ ಅಧ್ಯಕ್ಷ ರಾಘವೇಂದ್ರ ಆಯಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುತ್ತಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿರೇಮಗಳೂರು ಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಶಶಿಧರ ತೋಡ್ಕರ ಅವರು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಸಿತಾರ ರತ್ನ ರಹಿಮತ್ ಖಾನ್ ಮನೆತನದ ಎಲ್ಲ ಕಲಾವಿದರು ಉಪಸ್ಥಿತರಿರುತ್ತಾರೆ.  

ಉ. ಬಾಲೇಖಾನ ಸ್ಮರಣಾರ್ಥ ಪ್ರದಾನಿಸುವ ಇವೆರಡೂ ಪ್ರಶಸ್ತಿಗಳು ತಲಾ ರೂ. 25000/- (ಇಪ್ಪತ್ತೈದು ಸಾವಿರ) ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ.