ಬಾಗಲಕೋಟೆ: ಮುಂಗಾರು ಕೃಷಿ ಪೂರ್ವಭಾವಿ ಸಭೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆಯಾಗದಂತೆ ಕ್ರಮ

ಲೋಕದರ್ಶನ ವರದಿ

ಬಾಗಲಕೋಟೆ 16: ಪ್ರಸಕ್ತ ಮುಂಗಾರು ಹಂಗಾಮಿಗೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕೃಷಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಏಜೆನ್ಸಿಗಳು ಎಲ್ಲ ರೀತಿಯ ಮುಂಜಾಗೃತ ಹಾಗೂ ಕಟ್ಟುನಿಟ್ಟಿನ ಕ್ರಮಕಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೂಚಿಸಿದರು.

       ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಪರಿಕರಗಳ ವಿತರಣೆ ಹಾಗೂ ಸಮಗ್ರ ಕೃಷಿ ಅಭಿಯಾನ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕುರಿತು ಪೂರ್ವ ಸಿದ್ದತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ ಪ್ರಧಾನವಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ರೈತರಿಗೆ ಮುಂಗಾರು ಹಂಗಾಮಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಡೆತಡೆಯಾಗದಂತೆ ಕೃಷಿ ಅಧಿಕಾರಿಗಳು ಜಾಗರೂಕರಾಗಿರಬೇಕು. ಉತ್ತಮ ಗುಣಮಟ್ಟದ ಬೀಜ ಪೂರೈಕೆ, ಗೋದಾಮಗಳಲ್ಲಿ ವ್ಯವಸ್ಥಿತ ಶೇಖರಣೆ ಕುರಿತು ಮುಂಜಾಗ್ರತಾ ಕ್ರಮ ವಹಿಸತಕ್ಕದ್ದು ಎಂದು ತಿಳಿಸಿದರು.

ರಸಗೊಬ್ಬರಗಳ ವಿತರಣೆಗೆ ಈಗ ನೂತನ ಪದ್ದತಿ ಪಾಯಿಂಟ್ ಆಪ್ ಸೇಲ್ ಮಶೀನ್ ಬಳಕೆಯಾಗುತ್ತಿದ್ದು, ವ್ಯವಸ್ಥಿತವಾಗಿ ಪೂರೈಕೆಯಾಗುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ವಿವಿಧ ರಸಗೊಬ್ಬರ ಹಾಗೂ ಬಿತ್ತನೆ ಬೀಜಪೂರೈಸುವ ಏಜೆನ್ಸಿಗಳು, ಸಹಕಾರ ಸಂಘಗಳು ಸಹ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ನೀರಿನ ಸದ್ಬಳಕೆ, ಸುಸ್ಥಿರ ಜಲ ನಿರ್ವಹಣೆ ಹಾಗೂ ಸವಳು-ಜವಳು ತಡೆಗೆ ಹನಿ ನೀರಾವರಿ ಪದ್ದತಿಯನ್ನು ಹೆಚ್ಚಿನ ರೀತಿಯಲ್ಲಿ ಬಳಕೆಯಾಗುವಂತೆ ಅಧಿಕಾರಿಗಳು ಆಂದೋಲನ ಆರಂಬಿಸಬೇಕೆಂದು ಜಿಲ್ಲಧಿಕಾರಿಗಳು ಸೂಚಿಸಿದರು.

ಕೃಷಿ ಜಂಟಿ ನಿರ್ದೇಶಕರಾದ  ರಾಜಶೇಖರ ಬಿಜಾಪೂರ ಮಾತನಾಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 2.65 ಲಕ್ಷ ಹೆಕ್ಟೆರ್ ಬಿತ್ತನೆ ಕ್ಷೇತ್ರವಿದ್ದು, ಕೇಂದ್ರ ಕಚೇರಿಯಿಂದ 8369 ಕ್ವಿಂಟಲ್ ಬಿತ್ತನೆ ಬೀಜ ನಿಗದಿಯಾಗಿದೆ. ಹಂಗಾಮಿನ ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ಸರಬರಾಜು ಮಾಡಲಾಗುವುದಲ್ಲದೇ ಎಲ್ಲ ಬೆಳೆಗಳ ಬಿತ್ತನೆ ಬೀಜದ ದಾಸ್ತಾನು ಸಮರ್ಪಕವಾಗಿದೆಯೆಂದರು. ಎಲ್ಲ ವರ್ಗದ ರೈತರಿಗೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ, ಸಹಕಾರ ಸಂಘಗಳಲ್ಲಿ ವಿತರಿಸಲಾಗುತ್ತದೆ. ಜಿಲ್ಲೆಗೆ 97583 ಟನ್ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 387 ಬೀಜ ಮಾರಾಟಗಾರರಿದ್ದು, 127 ಸಹಕಾರ ಸಂಘಗಳಿವೆ ಎಂದು ತಿಳಿಸಿದರು.

ಕೃಷಿ ಅಭಿಯಾನ: 

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕೃಷಿ ಅಭಿಯಾನ ಹಾಗೂ ಕನರ್ಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಕುರಿತು ಸಹ ಚರ್ಚಿಸಲಾಯಿತು . ಕೃಷಿಯನ್ನು ಹೆಚ್ಚು ಲಾಭದಾಯಕ ಮಾಡಲು ಅವಶ್ಯವಿರುವ ತಂತ್ರಜ್ಞಾನ ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ವಿವಿಧ ಅಭಿವೃದ್ದಿ ಇಲಾಖೆಗಳ ಸಮನ್ವಯದಿಂದ ಸಮೂಹ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು  ಸಭೆಗೆ ತಿಳಿಸಿದರು.

ಪ್ರತಿ ಹೋಬಳಿಯಲ್ಲಿ, ಎಲ್ಲ ಗ್ರಾ.ಪಂಗಳಲ್ಲಿ ಎರಡು ದಿನಗಳ ತೀವ್ರ ಪ್ರಚಾರಕಾರ್ಯ, ಪ್ರದರ್ಶಏಕೆಗಳು , ಸ್ತಬ್ದಚಿತ್ರಗಳ ವಸ್ತು ಪ್ರದರ್ಶನ, ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ, ವಿಜ್ಞಾನಿಗಳ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದೆಂದರು. ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.