ಬ್ಯಾಡ್ಮಿಂಟನ್ ಕ್ರೀಡಾಪಟು ಸೈನಾ ನೆಹ್ವಾಲ್‍ ಬಿಜೆಪಿ ಸೇರ್ಪಡೆ

ನವದೆಹಲಿ, ಜ 29 :    ಮುಂದಿನ ತಿಂಗಳ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಪ್ರಚಾರ ರಂಗೇರಿರುವ ನಡುವೆಯೇ ಖ್ಯಾತ ಬ್ಯಾಡ್ಮಿಂಟನ್ ಕ್ರೀಡಾಪಟು ಸೈನಾ ನೆಹ್ವಾಲ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.  

ದೆಹಲಿ ಗದ್ದುಗೆಯನ್ನು ಏರಲೇಬೇಕೆಂಬ ಯತ್ನದಲ್ಲಿರುವ ಬಿಜೆಪಿಗೆ, ಸೈನಾ ನೆಹ್ವಾಲ್ ಸೇರ್ಪಡೆಯಿಂದ  ‘ಬ್ರಾಂಡ್‍ ಪವರ್'’ ಸಿಗುವ ನಿರೀಕ್ಷೆಯಿದೆ  

ಸೈನಾ ಬುಧವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

 1990 ಮಾರ್ಚ್ 19 ರಂದು ಜನಿಸಿದ ಸೈನಾ ನೆಹವಾಲ್ ಅವರು 24 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಇದರಲ್ಲಿ ಹನ್ನೊಂದು ಸೂಪರ್‌ಸಿರೀಸ್ ಪ್ರಶಸ್ತಿಗಳಿವೆ.  

2016 ರಲ್ಲಿ ಭಾರತ ಸರ್ಕಾರವು ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾದ ಪದ್ಮಭೂಷಣ ನಡಿ ಗೌರವಿಸಿದೆ.  

ರಾಷ್ಟ್ರದ ಎರಡು ಅಗ್ರ ಕ್ರೀಡಾ ಗೌರವಗಳಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನೂ ಸಹ ಸೈನಾ ಮುಡಿಗೇರಿಸಿಕೊಂಡಿದ್ದಾರೆ.  

ಹರಿಯಾಣದ ಹಿಸಾರ್ ಮೂಲದವರಾದ ಸೈನಾ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಹರಿಯಾಣದ ಮತದಾರರು ಮತ್ತು ಯುವಕರನ್ನು ಸೆಳೆಯಲು ಕೇಸರಿ ಪಾಳಯಕ್ಕೆ ಸಹಾಯವಾಗಲಿದೆ.  

"ನಾನು ದೇಶಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪಕ್ಷಕ್ಕೆ ಸೇರುತ್ತಿರುವುದರಿಂದ ಇಂದು ಮಹತ್ವದ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶಕ್ಕಾಗಿ ಕೊಡುಗೆ ನೀಡಲು ನನಗೆ ಸಾಧ್ಯವಾಗಿದೆ ಎಂದು ನನಗೆ ಸಂತೋಷವಾಗಿದೆ" ಎಂದು ಸೈನಾ ನೆಹವಾಲ್ ಸುದ್ದಿಗಾರರಿಗೆ ತಿಳಿಸಿದರು.

 ದೇಶದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ 'ಖೇಲೋ ಇಂಡಿಯಾ' ಸಂಬಂಧಿತ ಕಾರ್ಯಗಳಿಗಾಗಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.

 2015 ರಲ್ಲಿ ಸೈನಾ ನೆಹವಾಲ್ ವಿಶ್ವದ ನಂ .1 ಶ್ರೇಯಾಂಕವನ್ನು ಗಳಿಸಿದ್ದು, ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ.

 ಸೈನಾ ನೆಹವಾಲ್ ಅವರು ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ  ರಾಜಧಾನಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.